ಕೆನ್ಯಾ ಶಾಲಾ ಹಾಸ್ಟೆಲ್ನಲ್ಲಿ ಅಗ್ನಿದುರಂತ | ಕನಿಷ್ಠ 17 ವಿದ್ಯಾರ್ಥಿಗಳು ಮೃತ್ಯು

Update: 2024-09-06 17:25 GMT

Photo : AP

ನೈರೋಬಿ : ಕೆನ್ಯಾದ ಶಾಲೆಯೊಂದರ ವಸತಿ ನಿಲಯದಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 17 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು ಇತರ 13 ವಿದ್ಯಾರ್ಥಿಗಳಿಗೆ ಗಂಭೀರ ಸುಟ್ಟಗಾಯಗಳಾಗಿವೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.

ರಾಜಧಾನಿ ನೈರೋಬಿಯ ಉತ್ತರದಲ್ಲಿರುವ ನೆಯೇರಿ ಕೌಂಟಿಯ ಹಿಲ್ಸೈಡ್ ಎಂಡರಷಾ ಪ್ರಾಥಮಿಕ ಶಾಲೆಯ ವಸತಿ ನಿಲಯದಲ್ಲಿ ಗುರುವಾರ ರಾತ್ರಿ ಬೆಂಕಿ ದುರಂತ ಸಂಭವಿಸಿದೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಬೆಂಕಿ ದುರಂತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ವಸತಿ ನಿಲಯದಲ್ಲಿ 4ನೇ ತರಗತಿಯಿಂದ 8ನೇ ತರಗತಿವರೆಗಿನ 156 ಹುಡುಗರಿದ್ದರು ಎಂದು ಪೊಲೀಸ್ ವಕ್ತಾರೆ ರೆಸಿಲಾ ಒನ್ಯಾಂಗೊ ಹೇಳಿದ್ದಾರೆ.

ದುರಂತಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಹೊಣೆಗಾರರನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದಾರೆ. ಶಿಕ್ಷಣ ಇಲಾಖೆಯು ವಸತಿ ಶಾಲೆಗಳಿಗೆ ಶಿಫಾರಸು ಮಾಡಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸರಕಾರದ ವಕ್ತಾರ ಇಸಾಕ್ ಎಮುವಾರ ಆಗ್ರಹಿಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News