4 ಹೊಸ ಪರಮಾಣು ರಿಯಾಕ್ಟರ್ ನಿರ್ಮಾಣ: ಉಕ್ರೇನ್ ಘೋಷಣೆ

Update: 2024-01-26 16:47 GMT

Photo:NDTV

ಕೀವ್: ರಶ್ಯದ ಜತೆಗಿನ ಯುದ್ಧದ ಕಾರಣದಿಂದ ತನ್ನ ಇಂಧನ ಸಾಮಥ್ರ್ಯದಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಶೀಘ್ರವೇ 4 ಹೊಸ ಪರಮಾಣು ರಿಯಾಕ್ಟರ್‌ ಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಉಕ್ರೇನ್‍ನ ಇಂಧನ ಸಚಿವ ಜರ್ಮನ್ ಗಲುಷೆಂಕೊರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಎರಡು ರಿಯಾಕ್ಟರ್‌ ಗಳನ್ನು ಬಲ್ಗೇರಿಯಾದಿಂದ ಆಮದು ಮಾಡಿಕೊಳ್ಳುವ ರಶ್ಯ ನಿರ್ಮಿತ ಉಪಕರಣಗಳಿಂದ ಮತ್ತು ಉಳಿದ ಎರಡನ್ನು ಪಾಶ್ಚಿಮಾತ್ಯ ದೇಶಗಳ ಉಪಕರಣ ಬಳಸಿ ನಿರ್ಮಿಸಲಾಗುವುದು. ಎಲ್ಲಾ ನಾಲ್ಕು ರಿಯಾಕ್ಟರ್‌ ಗಳು ಪಶ್ಚಿಮ ಉಕ್ರೇನ್‍ನ ಖೆಮೆಲ್ನಿಟ್ಸ್ಕಿ ಪರಮಾಣು ಸ್ಥಾವರದಲ್ಲಿ ನಿರ್ಮಾಣಗೊಳ್ಳಲಿವೆ. ಮುಂದಿನ ಎರಡು ತಿಂಗಳೊಳಗೆ ನಿರ್ಮಾಣ ಕಾರ್ಯ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

1991ರಲ್ಲಿ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದಂದಿನಿಂದ ಉಕ್ರೇನ್ ಝಪೋರಿಝಿಯಾ, ಖೆಮೆಲ್ನಿಟ್ಸ್ಕಿ ಮತ್ತು ರಿವೈನ್ ಪರಮಾಣು ಸ್ಥಾವರದಲ್ಲಿ ತಲಾ ಒಂದು ರಿಯಾಕ್ಟರ್‌ ಗಳನ್ನು ನಿರ್ಮಿಸಿದೆ. ಆದರೆ ಯುರೋಪ್‍ನ ಅತೀ ದೊಡ್ಡ ಪರಮಾಣು ಸ್ಥಾವರ ಝಪೋರಿಝಿಯಾದ ನಿಯಂತ್ರಣ ರಶ್ಯದ ವಶಕ್ಕೆ ಬಂದಿರುವುದು ಉಕ್ರೇನ್‍ಗೆ ಹಿನ್ನಡೆಯಾಗಿದ್ದು ಝಪೋರಿಝಿಯಾದ 6 ಪರಮಾಣು ರಿಯಾಕ್ಟರ್‌ ಗಳು ಈಗ ನಿಷ್ಕ್ರಿಯಗೊಂಡಿವೆ. ಉಕ್ರೇನ್ ನಿಯಂತ್ರಣದಲ್ಲಿರುವ ಪರಮಾಣು ಸ್ಥಾವರಗಳು ದೇಶಕ್ಕೆ ಅಗತ್ಯವಿರುವ ವಿದ್ಯುತ್‍ಶ ಕ್ತಿಯ 55%ದಷ್ಟನ್ನು ಉತ್ಪಾದಿಸುತ್ತಿವೆ. `ನಾವೀಗ ಝಪೋರಿಝಿಯಾದ ಕೊರತೆಯನ್ನು ತುಂಬಿಸಬೇಕಿದ್ದು ವಿದ್ಯುತ್‍ಶಕ್ತಿಯಲ್ಲಿ ಮತ್ತಷ್ಟು ಸ್ವಾವಲಂಬಿಗಳಾಗಲು ಯೋಜನೆ ರೂಪಿಸಿದ್ದೇವೆ ಎಂದು ಜರ್ಮನ್ ಗಲುಷೆಂಕೊ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News