ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 40 ಮಂದಿ ಮೃತ್ಯು
ಕೈರೋ: ದಕ್ಷಿಣ ಗಾಝಾದಲ್ಲಿ ನಿರಾಶ್ರಿತ ಫೆಲೆಸ್ತೀನಿಯರಿದ್ದ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 40 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು aljazeera.com ವರದಿ ಮಾಡಿದೆ.
ಹಮಾಸ್ ಕಮಾಂಡ್ ಸೆಂಟರ್ ಅನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಆದರೆ ಅಮಾಯಕ ನಾಗರಿಕರನ್ನು ಗುರಿ ಮಾಡಲಾಗಿದೆ ಎಂದು ಹಮಾಸ್ ಹೇಳಿಕೊಂಡಿದೆ.
ಯುದ್ಧ ಪೀಡಿತ ಗಾಝಾದ ಅಲ್-ಮವಾಸಿ ಪ್ರದೇಶದಲ್ಲಿನ ಖಾನ್ ಯೂನಿಸ್ ನಗರದಲ್ಲಿ ಕಿಕ್ಕಿರಿದ ಜನಸಂಖ್ಯೆಯಿದ್ದ ನಿರಾಶ್ರಿತರ ಶಿಬಿರದ ಮೇಲೆ ಕನಿಷ್ಟ ನಾಲ್ಕು ಕ್ಷಿಪಣಿಗಳು ಅಪ್ಪಳಿಸಿದೆ ಎಂದು ಅಲ್ಲಿದ್ದ ನಿರಾಶ್ರಿತರು ಮತ್ತು ನೆರವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ.
ಗಾಝಾ ಆರೋಗ್ಯ ಸಚಿವಾಲಯ ತಕ್ಷಣಕ್ಕೆ ಸಾವು- ನೋವುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಇದಕ್ಕೂ ಮುನ್ನ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ 40 ಫೆಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಬೆಂಬಲಿತ ಶೆಹಾಬ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ನಮ್ಮ ತಂಡಗಳು ಸಾವಿನ ಸಂಖ್ಯೆ ಮತ್ತು ಗಾಯಾಳುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಇದು ಇಸ್ರೇಲ್ ನಡೆಸಿದ ಹೊಸ ಹತ್ಯಾಕಾಂಡದಂತೆ ತೋರುತ್ತಿದೆ ಎಂದು ಗಾಝಾ ನಾಗರಿಕ ತುರ್ತು ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಸೇನೆಯು ಖಾನ್ ಯೂನಿಸ್‌ನ ನಿರಾಶ್ರಿತರ ಶಿಬಿರದಲ್ಲಿನ ಹಮಾಸ್ ಶಸಸ್ತ್ರ ಧಾರಿಗಳನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.
ಇಸ್ರೇಲ್ ದಾಳಿಗೆ ಗಾಝಾದಲ್ಲಿ ಈವೆರೆಗೆ 40,900ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು.