ಜಪಾನ್‍ನಲ್ಲಿ ಚಂಡಮಾರುತ: 5 ಮಂದಿ ಸಾವು; 81 ಮಂದಿಗೆ ಗಾಯ

Update: 2024-08-30 16:42 GMT

ಸಾಂದರ್ಭಿಕ ಚಿತ್ರ | PTI

ಟೋಕಿಯೊ: ಗಂಟೆಗೆ 126 ಕಿ.ಮೀ ವೇಗದ ಗಾಳಿಯೊಂದಿಗೆ ಜಪಾನ್‍ಗೆ ಅಪ್ಪಳಿಸಿರುವ ಚಂಡಮಾರುತ ಶುಕ್ರವಾರ ಬೆಳಗ್ಗಿನ ವೇಳೆಗೆ ದುರ್ಬಲಗೊಂಡರೂ ವ್ಯಾಪಕ ನಾಶ-ನಷ್ಟಕ್ಕೆ ಕಾರಣವಾಗಿದ್ದು ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇತರ 81 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಕ್ಯುಷು ದ್ವೀಪಕ್ಕೆ ಅಪ್ಪಳಿಸುವುದಕ್ಕೂ ಮುನ್ನ ಶಿಕೊಕು ದ್ವೀಪದಲ್ಲಿ ಸುರಿದ ನಿರಂತರ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಸಣ್ಣ ದೋಣಿಯೊಂದು ಮುಳುಗಿ ಓರ್ವ ವ್ಯಕ್ತಿ ಹಾಗೂ ತೊಕುಷಿಮಾ ಪ್ರಾಂತದಲ್ಲಿ ಎರಡು ಮಹಡಿಗಳ ಕಟ್ಟಡ ಭಾಗಶಃ ಕುಸಿದುಬಿದ್ದು ಓರ್ವ ಮೃತಪಟ್ಟಿದ್ದಾನೆ. ಕ್ಯುಷು ದ್ವೀಪದಲ್ಲಿ ಬೀಸಿದ ಬಿರುಗಾಳಿಯಿಂದ ಕಿಟಕಿಯ ಗಾಜು ಒಡೆದು 81 ಮಂದಿ ಗಾಯಗೊಂಡಿದ್ದಾರೆ. 5 ಲಕ್ಷಕ್ಕೂ ಅಧಿಕ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸಲಹೆ ನೀಡಲಾಗಿದೆ. ಕ್ಯುಷು ಪ್ರದೇಶದಲ್ಲಿ 2,50,000ಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ. ಟೋಕಿಯೊ ಮತ್ತು ಒಸಾಕಾ ನಡುವಿನ ಬುಲೆಟ್ ಟ್ರೈನ್‍ಗಳನ್ನು ಸ್ಥಗಿತಗೊಳಿಸಲಾಗಿದ್ದು ಜಪಾನ್ ಏರ್‍ಲೈನ್ಸ್ ಹಾಗೂ ಎಎನ್‍ಎ ಸಂಸ್ಥೆಯ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News