ಗಾಝಾಕ್ಕೆ ನೆರವು ವಿತರಣೆ ಸಂದರ್ಭ ಪ್ಯಾರಾಚೂಟ್ ದುರಂತ ; 5 ಮಂದಿ ಸಾವು
ಗಾಝಾ: ಗಾಝಾಕ್ಕೆ ವಿಮಾನದ ಮೂಲಕ ಮಾನವೀಯ ನೆರವು ವಿತರಣೆ ಸಂದರ್ಭ ಪ್ಯಾರಾಚೂಟ್ ಬಿಚ್ಚಿಕೊಳ್ಳಲು ವಿಫಲವಾಗಿ ಮರದ ಪೆಟ್ಟಿಗೆಯೊಂದು ಆಹಾರ ಪಡೆಯಲು ಸರತಿ ಸಾಲಲ್ಲಿ ನಿಂತಿದ್ದವರ ಮೇಲೆ ಅಪ್ಪಳಿಸಿದೆ. ದುರಂತದಲ್ಲಿ 5 ಮಂದಿ ಸಾವನ್ನಪ್ಪಿದ್ದು ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಝಾದ ಶತಿ ನಿರಾಶ್ರಿತರ ಶಿಭಿರದಲ್ಲಿ ದುರಂತ ನಡೆದಿದ್ದು ಗಾಯಗೊಂಡವರನ್ನು ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ದೇಶದಿಂದ ಬಂದ ವಿಮಾನವು ಸಾವು-ನೋವಿಗೆ ಕಾರಣವಾಗಿದೆ ಎಂಬುದನ್ನು ಜೋರ್ಡಾನ್ ಮತ್ತು ಅಮೆರಿಕ ನಿರಾಕರಿಸಿವೆ. ಬೆಲ್ಜಿಯಂ, ಈಜಿಪ್ಟ್, ಫ್ರಾನ್ಸ್ ಮತ್ತು ನೆದರ್ಲ್ಯಾಂಡ್ ಸಹಭಾಗಿತ್ವದಲ್ಲಿ ನೆರವು ವಿತರಿಸುವ ಸಂದರ್ಭ ದುರಂತ ನಡೆದಿರುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಗಾಝಾ ಸರಕಾರಿ ಸ್ವಾಮ್ಯದ ಮಾಧ್ಯಮ ಕಚೇರಿ ವಿಮಾನದ ಮೂಲಕ ನೆರವು ಒದಗಿಸುವುದನ್ನು ಖಂಡಿಸಿದ್ದು ಇದು ನಿಷ್ಪ್ರಯೋಜಕ ಮತ್ತು ಮಾನವೀಯ ನೆರವಿನ ಬದಲು ಪ್ರಚಾರ ಪಡೆಯುವ ಪ್ರಕ್ರಿಯೆಯಾಗಿದೆ ಎಂದು ಹೇಳಿದೆ. ರಸ್ತೆ ಮಾರ್ಗದ ಮೂಲಕ ನೆರವು ವಿತರಣೆಯ ಬಗ್ಗೆ ನಾವು ಈ ಹಿಂದೆಯೇ ಆಗ್ರಹಿಸಿದ್ದೆವು. ವಿಮಾನದ ಮೂಲಕ ಆಹಾರ ಉದುರಿಸುವುದು ಗಾಝಾದ ನಾಗರಿಕರ ಜೀವಕ್ಕೆ ಇದು ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದೆವು. ಇವತ್ತು ಇದೇ ಸಂಭವಿಸಿದೆ. ಪಾರ್ಸೆಲ್ ಇರಿಸಿದ್ದ ಪೆಟ್ಟಿಗೆ ಜನರ ತಲೆಯ ಮೇಲೆ ಬಿದ್ದಿದೆ ಎಂದು ಗಾಝಾ ಸರಕಾರ ಹೇಳಿದೆ.
ಗಾಝಾದಲ್ಲಿ ವಿಮಾನದ ಮೂಲಕ ನೆರವು ವಿತರಣೆ ಅಥವಾ ಪ್ರಸ್ತಾವಿತ ಕಡಲ ಸಹಾಯ ಕಾರಿಡಾರ್ ಯೋಜನೆಯು ರಸ್ತೆ ಮಾರ್ಗದ ಮೂಲಕ ನೆರವು ವಿತರಿಸುವುದಕ್ಕೆ ಪರ್ಯಾಯ ಆಗದು. ಆದ್ದರಿಂದ ಟ್ರಕ್ಗಳ ಮೂಲಕ ಸಾಧ್ಯವಾದಷ್ಟು ಹೆಚ್ಚು ನೆರವು ವಿತರಣೆಗೆ ಅವಕಾಶದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಮಧ್ಯೆ, ರವಿವಾರದ ಒಳಗೆ ಕಡಲ ಸಹಾಯ ಕಾರಿಡಾರ್ ಆರಂಭವಾಗುವ ನಿರೀಕ್ಷೆಯಿದೆ ಎಂದು ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ಡರ್ ಲಿಯೆನ್ ಹೇಳಿದ್ದಾರೆ.