ಗಾಝಾದ ಶೇ.90ರಷ್ಟು ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ ; ಯುನಿಸೆಫ್ ವರದಿ
ಗಾಝಾ: ಇಸ್ರೇಲ್ ಸೇನೆಯ ಭೀಕರ ದಾಳಿಗೆ ಸಾಕ್ಷಿಯಾಗಿರುವ ಗಾಝಾದಲ್ಲಿ ಶೇ.90ರಷ್ಟು ಮಕ್ಕಳು ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿದ್ದಾರೆ. ತಮ್ಮ ಉಳಿವು, ಬೆಳವಣಿಗೆ ಹಾಗೂ ವಿಕಸನಕ್ಕೆ ತೀವ್ರವಾದ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ವರದಿ ತಿಳಿಸಿದೆ.
ಗಾಝಾಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಆಕ್ರಮಣವು ಆರೋಗ್ಯ ಹಾಗೂ ಆಹಾರ ವ್ಯವಸ್ಥೆಯ ಪತನಕ್ಕೆ ಕಾರಣವಾಗಿದೆ. ಅಲ್ಲಿನ ಪ್ರತಿ ಹತ್ತು ಮಕ್ಕಳ ಪೈಕಿ ಒಂದು ಮಗು ಎರಡು ಸಲ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿ ಜೀವವುಳಿಸಿಕೊಂಡಿವೆ ಎಂದು ಅದು ಹೇಳಿದೆ.
ಗಾಝಾದ ಮಕ್ಕಳಲ್ಲಿ ಪೌಷ್ಟಿಕತೆಯ ಕೊರತೆ ಕಳವಳಕಾರಿ ಮಟ್ಟಕ್ಕೆ ಏರಿದ್ದು, ಫೆಬ್ರವರಿಯಲ್ಲಿ ಅವರ ಪೈಕಿ ಶೇ.65ರಷ್ಟು ಮಂದಿ ಕೇವಲ ಒಂದು ಆಹಾರ ಅಥವಾ ಆಹಾರ ವಂಚಿತವಾಗಿವೆ ಎಂದು ಹೇಳಿದೆ.
ಗಾಝಾದಲ್ಲಿ ನಾಗರಿಕರಿಗೆ ಮಾನವೀಯ ಸಾಮಾಗ್ರಿಗಳ ಪೂರೈಕೆಗೆ ಯಾವುದೇ ಮಿತಿಯನ್ನು ವಿಧಿಸಲಾಗಿಲ್ಲ . ಆದರೆ ವಿಶ್ವಸಂಸ್ಥೆಯ ಏಜೆನ್ಸಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸದ ಕಾರಣ ಅವುಗಳ ಪೂರೈಕೆ ಮಂದಗತಿಯಲ್ಲಿ ಸಾಗುತ್ತಿದೆ ಎಂದವರು ಹೇಳಿದ್ದಾರೆ.
ಇಸ್ರೇಲ್‌ನ ಆರೋಪವನ್ನು ಯುನಿಸೆಫ್ ಅಲ್ಲಗಳೆದಿದ್ದು, ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯು ಆಹಾರ ಪೂರೈಕೆವ್ಯವಸ್ಥೆಗಳನ್ನು ನಾಶಪಡಿಸಿದೆ. ವಾಣಿಜ್ಯ ಸಾಮಾಗ್ರಿಗಳು ಹಾಗೂ ಮಾನವೀಯ ಪೂರೈಕೆಗಳ ಆಮದಿನ ಮೇಲೆ ತೀವ್ರವಾದ ನಿರ್ಬಂಧಗಳನ್ನು ವಿಧಿಸಿದೆ. ಆದಾಗ್ಯೂ ಆಹಾರ ಪೂರೈಕೆ ವ್ಯವಸ್ಥೆಗೆ ಆಸ್ಪದ ಮಾಡಿಕೊಟ್ಟಿದೆ. ಲಕ್ಷಾಂತರ ಜನರು ಆಹಾರ, ನೀರು ಹಾಗೂ ಇಂಧನದಿಂದ ವಂಚಿತರಾಗಿದ್ದಾರೆಂದು ಹೇಳಿದೆ.