ಫೆಲೆಸ್ತೀನ್-ಇಸ್ರೇಲ್ ಸಂಘರ್ಷ | ಒಂದು ವರ್ಷದ ಯುದ್ಧದಲ್ಲಿ 902 ಕುಟುಂಬಗಳ ಸರ್ವನಾಶ!
ಗಾಝಾ : ಕಳೆದ ಒಂದು ವರ್ಷದಿಂದ ಫೆಲೆಸ್ತೀನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ 902 ಫೆಲೆಸ್ತೀನ್ ಕುಟುಂಬಗಳು ಸರ್ವನಾಶವಾಗಿದ್ದರೆ, 1,364 ಫೆಲೆಸ್ತೀನ್ ಕುಟುಂಬಗಳ ಪೈಕಿ ತಲಾ ಓರ್ವ ವ್ಯಕ್ತಿ ಜೀವಂತವಾಗಿ ಉಳಿದಿದ್ದಾರೆ. ಇನ್ನುಳಿದ 3,472 ಫೆಲೆಸ್ತೀನ್ ಕುಟುಂಬಗಳ ಪೈಕಿ ತಲಾ ಇಬ್ಬರು ಮಾತ್ರ ಜೀವಂತವಾಗಿ ಉಳಿದಿದ್ದಾರೆ ಎಂಬ ಆಘಾತಕಾರಿ ಸಂಗತಿಯನ್ನು ಗಾಝಾ ಸರಕಾರಿ ಮಾಧ್ಯಮ ಕಚೇರಿ ಪ್ರಕಟಿಸಿದೆ.
ಬುಧವಾರ ಈ ಅಂಕಿ-ಅಂಶಗಳನ್ನು ಪ್ರಕಟಿಸಿರುವ ಗಾಝಾ ಮಾಧ್ಯಮ ಕಚೇರಿ, ಅಮೆರಿಕ ಮತ್ತು ಪಾಶ್ಚಿಾಮಾತ್ಯ ದೇಶಗಳ ನೆರವಿನಿಂದ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸುತ್ತಿದೆ ಎಂದು ಆರೋಪಿಸಿದೆ. ಒಂದು ವರ್ಷದ ಹಿಂದೆ ಪ್ರಾರಂಭಗೊಂಡ ಯುದ್ಧದಲ್ಲಿ ಈವರೆಗೆ 41,000 ಮಂದಿ ಮೃತಪಟ್ಟಿದ್ದು, ಸುಮಾರು 20,000 ಮಂದಿ ನಾಪತ್ತೆಯಾಗಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಗೆ ಅಮೆರಿಕ ಮತ್ತು ಯೂರೋಪಿಯನ್ ದೇಶಗಳಾದ ಗ್ರೇಟ್ ಬ್ರಿಟನ್, ಜರ್ಮನಿ ಹಾಗೂ ಫ್ರಾನ್ಸ್ ನಿಷೇಧಿತ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಪ್ರಕಟಣೆಯಲ್ಲಿ ಖಂಡಿಸಲಾಗಿದೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಹಾಗೂ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಲು ಅಂತಾರಾಷ್ಟ್ರೀಯ ಸಮುದಾಯಗಳು ಹಾಗೂ ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದೂ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.
ಹಮಾಸ್ - ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ, ಅಕ್ಟೋಬರ್ 7ರಂದು ಫೆಲೆಸ್ತೀನ್ ಮೇಲೆ ಪ್ರಾರಂಭಗೊಂಡ ಇಸ್ರೇಲ್ ಯುದ್ಧವು ಇದೀಗ ಲೆಬನಾನ್ ಗೂ ವಿಸ್ತರಿಸಿದೆ.