ಬಾಸ್ಕೆಟ್ಬಾಲ್ ಆಟಗಾರನಿಗೆ ಹೃದಯಾಘಾತ; ಕೋವಿಡ್ ಲಸಿಕೆ ಕಾರಣ ಎಂದ ಎಲಾನ್ ಮಸ್ಕ್
ನ್ಯೂಯಾರ್ಕ್: ಅಮೆರಿಕದ ಖ್ಯಾತ ಬಾಸ್ಕೆಟ್ಬಾಲ್ ಆಟಗಾರ, ಎನ್ಬಿಎ ಸೂಪರ್ಸ್ಟಾರ್ ಲೆಬ್ರಾನ್ನ ಪುತ್ರ ಬ್ರಾನಿ ಜೇಮ್ಸ್ ಬಾಸ್ಕೆಟ್ಬಾಲ್ ತರಬೇತಿ ಪಡೆಯುತ್ತಿದ್ದ ಸಂದರ್ಭ ಹೃದಯ ಸ್ಥಂಭನದಿಂದ ಕುಸಿದು ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ವಿಟರ್ ಸಂಸ್ಥೆಯ ಮಾಲಕ ಎಲಾನ್ ಮಸ್ಕ್, ಕೋವಿಡ್ ಲಸಿಕೆಯ ಅಡ್ಡಪರಿಣಾಮ ಇದಕ್ಕೆ ಕಾರಣವಾಗಿರಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. `ನಾವು ಲಸಿಕೆಗೆ ಎಲ್ಲವನ್ನೂ ಆರೋಪಿಸಲು ಸಾಧ್ಯವಿಲ್ಲ, ಆದರೆ ಇದೇ ವೇಳೆ ಏನನ್ನೂ ಆರೋಪಿಸದಿರಲೂ ಸಾಧ್ಯವಿಲ್ಲ. ಮಯೊಕಾರ್ಡಿಟಿಸ್ ಎಂಬುದು ತಿಳಿದಿರುವ ಅಡ್ಡಪರಿಣಾಮವಾಗಿದೆ.
ಇಲ್ಲಿರುವ ಪ್ರಶ್ನೆಯೆಂದರೆ ಈ ಅಡ್ಡಪರಿಣಾಮ ಅಪರೂಪವೇ ಅಥವಾ ಸರ್ವೇಸಾಮಾನ್ಯವೇ ಎಂಬುದಾಗಿದೆ' ಎಂದು ಮಸ್ಕ್ ಉಲ್ಲೇಖಿಸಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಲಸಿಕೆಗಳ ಬಗ್ಗೆ ಆಧಾರವಿಲ್ಲದ ಮತ್ತು ಪಿತೂರಿ ಸಿದ್ಧಾಂತಗಳನ್ನು ಹರಡಲು ಮಸ್ಕ್ ತನ್ನ ವೇದಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ದಕ್ಷಿಣ ಕ್ಯಾಲಿಫೋರ್ನಿಯಾದ ವಿವಿಯಲ್ಲಿ ಬಾಸ್ಕೆಟ್ಬಾಲ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ 18 ವರ್ಷದ ಜೇಮ್ಸ್ ಹೃದಯಸ್ಥಂಭನಕ್ಕೆ ಒಳಗಾದರು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆತನ ಆರೋಗ್ಯಸ್ಥಿತಿ ಈಗ ಸ್ಥಿರವಾಗಿದ್ದು ಐಸಿಯುನಿಂದ ಜನರಲ್ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಕುಟುಂಬದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.