ಸೊಮಾಲಿಯಾದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 96ಕ್ಕೆ ಏರಿಕೆ
ಮೊಗದಿಶು: ಸೊಮಾಲಿಯಾದಲ್ಲಿ ಅಕ್ಟೋಬರ್ ನಿಂದ ಪ್ರಾರಂಭವಾದ ಭಾರೀ ಮಳೆಯಿಂದ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮೃತರ ಸಂಖ್ಯೆ 96ಕ್ಕೇರಿದೆ ಎಂದು ಸರಕಾರಿ ಸ್ವಾಮ್ಯದ ʼಸೋನ್ನ' ಸುದ್ಧಿಸಂಸ್ಥೆ ಶನಿವಾರ ವರದಿ ಮಾಡಿದೆ.
ಎಲ್‍ನಿನೊ ಮತ್ತು ಹಿಂದೂ ಮಹಾಸಾಗರದಲ್ಲಿ ಉಂಟಾದ ಹವಾಮಾನ ವಿದ್ಯಮಾನಗಳಿಂದಾಗಿ ಸೊಮಾಲಿಯಾ ಸೇರಿದಂತೆ ಆಫ್ರಿಕಾದ ಹಲವು ದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸೊಮಾಲಿಯಾದಲ್ಲಿ ಉಂಟಾಗಿರುವ ಪ್ರವಾಹ ದಶಕದಲ್ಲೇ ಅತ್ಯಂತ ಮಾರಣಾಂತಿಕವಾಗಿದ್ದು ಅಕ್ಟೋಬರ್‍ನಿಂದ ಸುಮಾರು 7 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯು ದೇಶಾದ್ಯಂತ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದ್ದು ಲಕ್ಷಾಂತರ ಮಂದಿ ಸ್ಥಳಾಂತರಗೊಂಡಿದ್ದಾರೆ. ದಂಗೆ, ಅಂತರ್ಯುದ್ಧದಿಂದ ಈಗಾಗಲೇ ಅಸ್ತಿತ್ವದಲ್ಲಿರುವ ಮಾನವೀಯ ಬಿಕ್ಕಟ್ಟನ್ನು ಮತ್ತಷ್ಟು ಹದಗೆಡಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ನೆರೆಯ ಕೆನ್ಯಾದಲ್ಲಿ ಪ್ರವಾಹದಿಂದ ಇದುವರೆಗೆ 76 ಮಂದಿ ಮೃತಪಟ್ಟಿರುವುದಾಗಿ ಕೆನ್ಯಾ ರೆಡ್‍ಕ್ರಾಸ್ ಸಂಸ್ಥೆ ಮಾಹಿತಿ ನೀಡಿದೆ. ಮಳೆ, ಪ್ರವಾಹದಿಂದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದು ರಸ್ತೆ, ಸೇತುವೆಗಳಿಗೆ ವ್ಯಾಪಕ ಹಾನಿಯಾಗಿದೆ ಮತ್ತು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕುಡಿಯುವ ನೀರು, ಆಹಾರ ಪೂರೈಕೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.