ಮರುಏಕೀಕರಣದ ಕಮಾನು ಧ್ವಂಸಗೊಳಿಸಿದ ಉತ್ತರ ಕೊರಿಯಾ
ಪೋಂಗ್ಯಾಂಗ್: ದಕ್ಷಿಣ ಕೊರಿಯಾದ ಜತೆ ಮರು ಏಕೀಕರಣದ ಉದ್ದೇಶದಿಂದ ಪೋಂಗ್ಯಾಂಗ್ನಲ್ಲಿ ಸ್ಥಾಪಿಸಲಾಗಿದ್ದ ಪ್ರಮುಖ ಸ್ಮಾರಕವನ್ನು ಅಧ್ಯಕ್ಷ ಕಿಮ್ಜಾಂಗ್ ಉನ್ ಆದೇಶದ ಮೇರೆಗೆ ಉತ್ತರ ಕೊರಿಯಾ ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ.
ದಕ್ಷಿಣ ಕೊರಿಯಾ ತನ್ನ ಪ್ರಮುಖ ಶತ್ರುವಾಗಿದ್ದು ಅದರೊಂದಿಗೆ ಮರುಏಕೀಕರಣ ಎಂದಿಗೂ ಸಾಧ್ಯವಿಲ್ಲ ಎಂದು ಕಳೆದ ವಾರ ಕಿಮ್ಜಾಂಗ್ ಹೇಳಿಕೆ ನೀಡಿದ್ದರು ಮತ್ತು ಮರುಏಕೀಕರಣದ ಕಮಾನು `ಕೊಳಕು ಸ್ಮಾರಕ'ವಾಗಿದ್ದು ಅದರ ಅಗತ್ಯವಿಲ್ಲ ಎಂದಿದ್ದರು.
2000ನೇ ಇಸವಿಯಲ್ಲಿ ನಡೆದಿದ್ದ ಅಂತರ್- ಕೊರಿಯಾ ಶೃಂಗಸಭೆಯ ಬಳಿಕ ಸ್ಥಾಪಿಸಲಾಗಿದ್ದ 30 ಮೀಟರ್ ಎತ್ತರದ ಸ್ಮಾರಕವು `ರಾಷ್ಟ್ರೀಯ ಪುನರೇಕೀಕರಣಕ್ಕಾಗಿ 3 ಚಾರ್ಟರ್ ಗಳ ಸ್ಮಾರಕ'ವೆಂದು ಹೆಸರಾಗಿತ್ತು. ಅದನ್ನು ಧ್ವಂಸಗೊಳಿಸುವ ಫೋಟೋವನ್ನು ಉಪಗ್ರಹಗಳು ರವಾನಿಸಿವೆ ಎಂದು ದಕ್ಷಿಣ ಕೊರಿಯಾದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಈ ಮಧ್ಯೆ, ಉತ್ತರ ಕೊರಿಯಾ ಬುಧವಾರ ಹಳದಿ ಸಮುದ್ರದತ್ತ ಹಲವು ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಪಡೆ ಹೇಳಿದೆ.
ಬುಧವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ಸರಣಿ ಕ್ರೂಸ್ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪ್ರಯೋಗಿಸಿರುವುದನ್ನು ನಮ್ಮ ರಕ್ಷಣಾ ಪಡೆ ಪತ್ತೆಹಚ್ಚಿದ್ದು ಈ ಬಗ್ಗೆ ಅಮೆರಿಕದ ಗುಪ್ತಚರ ಅಧಿಕಾರಿಗಳ ಜತೆ ನಿಕಟ ಪರಿಶೀಲನೆ ನಡೆಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆಯ ನಿರ್ಬಂಧದ ವ್ಯಾಪ್ತಿಯಲ್ಲಿ ಕ್ರೂಸ್ ಕ್ಷಿಪಣಿ ಪರೀಕ್ಷೆ ಸೇರಿಲ್ಲ. ಅತ್ಯಾಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಕಡಿಮೆ ಎತ್ತರದಲ್ಲಿ ಹಾರುವ ಕ್ರೂಸ್ ಕ್ಷಿಪಣಿಗಳನ್ನು ಪತ್ತೆಹಚ್ಚಲು ಮತ್ತು ಪ್ರತಿಬಂಧಿಸಲು ಕಷ್ಟವಾಗುತ್ತದೆ. ಕೊರಿಯಾ ಪರ್ಯಾಯ ದ್ವೀಪದ ಬೆಳವಣಿಗೆಗಳನ್ನು ಅತ್ಯಂತ ನಿಕಟವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯಿಸಿದ್ದಾರೆ.