ಗೋಲನ್ ಹೈಟ್ಸ್ ಮೇಲೆ ಸರಣಿ ರಾಕೆಟ್ ದಾಳಿ | ಮಕ್ಕಳ ಸಹಿತ 12 ಮಂದಿ ಮೃತ್ಯು
ಗಾಝಾ : ಇಸ್ರೇಲ್ ನಿಯಂತ್ರಣದ ಗೋಲನ್ ಹೈಟ್ಸ್ ಪ್ರದೇಶದ ಮೇಲೆ ಶನಿವಾರ ಸರಣಿ ರಾಕೆಟ್ ದಾಳಿ ನಡೆದಿದ್ದು ಮಕ್ಕಳ ಸಹಿತ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು ಇತರ 29 ಮಂದಿ ಗಾಯಗೊಂಡಿದ್ದಾರೆ. ಇದು ಅಕ್ಟೋಬರ್ 7ರ ಬಳಿಕ ಇಸ್ರೇಲ್ ಗುರಿಗಳ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿಯಾಗಿದೆ ಎಂದು ಇಸ್ರೇಲ್ ಹೇಳಿದೆ.
ಅಮೆರಿಕ ಪ್ರವಾಸ ಮೊಟಕುಗೊಳಿಸಿರುವ ಇಸ್ರೇಲ್ ಪ್ರಧಾನಿ ಸ್ವದೇಶಕ್ಕೆ ಧಾವಿಸಿದ್ದು ಭದ್ರತಾ ಸಮಿತಿಯ ತುರ್ತು ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಲೆಬನಾನ್ ಗಡಿಯಾಚೆಗಿಂದ ಸುಮಾರು 30 ರಾಕೆಟ್ ದಾಳಿ ನಡೆದಿದ್ದು ಇದು ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಕೃತ್ಯ ಎಂದು ಇಸ್ರೇಲ್ ಆರೋಪಿಸಿದೆ. ದಾಳಿಯಲ್ಲಿ ತಾನು ಶಾಮೀಲಾಗಿಲ್ಲ ಎಂದು ಹಿಜ್ಬುಲ್ಲಾ ಸ್ಪಷ್ಟಪಡಿಸಿದೆ.
ಈ ದಾಳಿಯಿಂದ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ದೀರ್ಘಾವಧಿಯಿಂದ ನೆಲೆಸಿರುವ ಉದ್ವಿಗ್ನತೆ ಉಲ್ಬಣಿಸುವ ಸಾಧ್ಯತೆಯಿದೆ. ಹಿಜ್ಬುಲ್ಲಾ ವಿರುದ್ಧ ಪ್ರತೀಕಾರ ದಾಳಿ ನಡೆಸುವಂತೆ ಇಸ್ರೇಲ್ನ ಪ್ರಮುಖ ರಾಜಕೀಯ ಮುಖಂಡರು ಸರಕಾರವನ್ನು ಆಗ್ರಹಿಸಿದ್ದಾರೆ. ಇಸ್ರೇಲ್ ಆಕ್ರಮಿತ ಉತ್ತರ ಗೋಲನ್ ಹೈಟ್ಸ್ನ ಮಜ್ದಲ್ ಶಮ್ಸ್ ಗ್ರಾಮದ ಮೇಲೆ ನಡೆದಿದೆ. ಮಕ್ಕಳು ಮತ್ತು ಯುವಕರು ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ ಮೈದಾನವೂ ದಾಳಿಯ ಗುರಿಯಾಗಿತ್ತು.
ಇದು ಅತ್ಯಂತ ಗಂಭೀರ ಘಟನೆಯಾಗಿದ್ದು ನಾವು ಸೂಕ್ತ ಪ್ರತಿಕ್ರಮ ಕೈಗೊಳ್ಳುತ್ತೇವೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್)ಯ ವಕ್ತಾರ ಡೇನಿಯಲ್ ಹಗಾರಿ ಹೇಳಿದ್ದಾರೆ. ಇರಾನ್ ನಿರ್ಮಿತ ಫಲಾಕ್ 1 ರಾಕೆಟ್ ಮೈದಾನಕ್ಕೆ ಅಪ್ಪಳಿಸಿದ್ದು ಇದು 50 ಕಿ.ಗ್ರಾಂನಷ್ಟು ಸಿಡಿತಲೆಗಳನ್ನು ಹೊತ್ತೊಯ್ಯುತ್ತದೆ. ಈ ಮಾದರಿಯ ರಾಕೆಟ್ ಹಿಜ್ಬುಲ್ಲಾದ ಬಳಿ ಮಾತ್ರವಿದೆ ಮತ್ತು ಇದರಿಂದ 12 ಬಾಲಕರ ಮತ್ತು ಬಾಲಕಿಯರ ಸಾವು ಸಂಭವಿಸಿದೆ ಎಂದವರು ಹೇಳಿದ್ದಾರೆ.
ಫುಟ್ಬಾಲ್ ಆಡುತ್ತಿದ್ದ ಮಕ್ಕಳ ಮೇಲಿನ ದಾಳಿಯಿಂದ ತೀವ್ರ ಆಘಾತವಾಗಿದೆ. ಈ ಬಗ್ಗೆ ಇಸ್ರೇಲ್ ಸುಮ್ಮನಿರುವುದಿಲ್ಲ. ಇದಕ್ಕೆ ಭಾರೀ ಬೆಲೆಯನ್ನು ಹಿಜ್ಬುಲ್ಲಾ ತೆರಬೇಕಾಗುತ್ತದೆ. ಇರಾನ್ನಲ್ಲಿರುವ ದುಷ್ಟ ಸಾಮ್ರಾಜ್ಯದ ಆಜ್ಞೆಯ ಮೇಲೆ ನಡೆದಿರುವ ದಾಳಿಯ ಬಗ್ಗೆ ಜಗತ್ತು ಮೌನವಾಗಿರಲು ಸಾಧ್ಯವಿಲ್ಲ. ತನ್ನ ಪ್ರಜೆಗಳನ್ನು ಮತ್ತು ಸಾರ್ವಭೌಮತ್ವವನ್ನು ಇಸ್ರೇಲ್ ದೃಢವಾಗಿ ರಕ್ಷಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವೆ ಹಲವು ದಶಕಗಳಿಂದಲೂ ಯುದ್ಧ ನಡೆಯುತ್ತಿದೆ. ಆದರೆ ಅಕ್ಟೋಬರ್ 7ರಂದು ಗಾಝಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್ ಯುದ್ಧಸಾರಿದ ಬಳಿಕ ಲೆಬನಾನ್ನಲ್ಲಿ ನೆಲೆಹೊಂದಿರುವ ಹಿಜ್ಬುಲ್ಲಾ ಮತ್ತು ಇಸ್ರೇಲ್ ಪರಸ್ಪರ ದಾಳಿ ನಡೆಸುತ್ತಿವೆ. ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಕಮಾಂಡರ್ಗಳು ಸಾವನ್ನಪ್ಪಿದ ಬಳಿಕ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮುಖ್ಯಸ್ಥರು, ರಕ್ಷಣಾ ಪಡೆ ಮುಖ್ಯಸ್ಥರು, ಉನ್ನತ ಭದ್ರತಾ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಇಸ್ರೇಲ್ನ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ` ಇಸ್ರೇಲ್ ಶತ್ರುಗಳಿಗೆ ತೀವ್ರ ಪ್ರಹಾರ ನೀಡಲಿದೆ' ಎಂದು ಘೋಷಿಸಿದ್ದಾರೆ.
ಗೋಲನ್ ಹೈಟ್ಸ್ ಮೇಲಿನ ದಾಳಿಯ ಬಳಿಕ ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಗರಿಷ್ಟ ಸಂಯಮ ವಹಿಸುವಂತೆ ಎರಡೂ ದೇಶಗಳಿಗೆ ಕರೆ ನೀಡಿದೆ.
ಇನ್ನು ಸುಮ್ಮನಿರುವಂತಿಲ್ಲ: ನಫ್ತಾಲಿ ಬೆನೆಟ್
ಲೆಬನಾನ್ ಮತ್ತು ಹಿಜ್ಬುಲ್ಲಾ ಇಸ್ರೇಲ್ನೊಂದಿಗೆ ಯುದ್ಧ ಆರಂಭಿಸಿವೆ. ಇನ್ನು ಸುಮ್ಮನಿರುವಂತಿಲ್ಲ. ಇನ್ನು ನಮಗೆ ಲೆಬನಾನ್ ಮತ್ತು ಲೆಬನಾನ್ನ ಭಾಗವಾಗಿರುವ ಹಿಜ್ಬುಲ್ಲಾ ಎರಡೂ ಸಮವಾಗಿದೆ. ಇಬ್ಬರ ನಡುವೆ ವ್ಯತ್ಯಾಸವಿಲ್ಲ. ಯೆಮನ್, ಇರಾನ್, ಇರಾಕ್, ಲೆಬನಾನ್ನಿಂದ ನಮ್ಮ ಮೇಲೆ ಹಗಲೂ ರಾತ್ರಿ ದಾಳಿ ನಡೆಸುವ ಶತ್ರುಗಳನ್ನು ತಡೆಯುವ ಏಕೈಕ ಮಾರ್ಗವೆಂದರೆ ಪ್ರತಿದಾಳಿ ನಡೆಸುವುದು. ಬೇರೆ ಆಯ್ಕೆಯೇ ಇಲ್ಲ' ಎಂದು ಇಸ್ರೇಲ್ ಮಾಜಿ ಪ್ರಧಾನಿ ನಫ್ತಾಲಿ ಬೆನ್ನೆಟ್ ಹೇಳಿದ್ದಾರೆ.