ಪನ್ನೂನ್ ಹತ್ಯೆಗೆ ಸಂಚು ಆರೋಪ: ನಿಖಿಲ್ ಗುಪ್ತಾ ಗಡೀಪಾರಿಗೆ ಝೆಕ್ ಕೋರ್ಟ್ ಅಸ್ತು
ಪರುಗ್ವೆ: ಸಿಖ್ ಪ್ರತ್ಯೇಕತಾವಾದಿಯನ್ನು ಅಮೆರಿಕದಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಆರೋಪಿ ನಿಖಿಲ್ ಗುಪ್ತಾ (52) ಎಂಬಾತನನ್ನು ಅಮೆರಿಕಕ್ಕೆ ಗಡೀಪಾರು ಮಾಡಲು ಝೆಕ್ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ನ್ಯಾಯ ಸಚಿವಾಲಯ ಶುಕ್ರವಾರ ಹೇಳಿದೆ.
ಪ್ರಕರಣದಲ್ಲಿ ಸಂಬಂಧಪಟ್ಟ ಎಲ್ಲರಿಗೆ ತೀರ್ಪಿನ ಪ್ರತಿಯನ್ನು ನೀಡಿದ ಬಳಿಕ ಆರೋಪಿಯ ಗಡೀಪಾರಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ನ್ಯಾಯ ಖಾತೆ ಸಚಿವ ಪಾವೆಲ್ ಬ್ಲಾಝೆಕ್ ಅವರ ನಿರ್ಧಾರವನ್ನು ಅವಲಂಬಿಸಿದೆ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಭಾರತ ಸರ್ಕಾರದ ಅಧಿಕಾರಿಗಳ ಜತೆ ಕಾರ್ಯ ನಿರ್ವಹಿಸುತ್ತಿರುವ ಅಮೆರಿಕದ ಫೆಡರಲ್ ಅಭಿಯೋಜಕರು ಗುಪ್ತಾ ವಿರುದ್ಧ, ನ್ಯೂಯಾರ್ಕ್ ನಿವಾಸಿ ಹಾಗೂ ಪ್ರತ್ಯೇಕತಾವಾದಿ ಮುಖಂಡ, ಭಾರತದಲ್ಲಿ ಪ್ರತ್ಯೇಕ ಹಾಗೂ ಸ್ವತಂತ್ರ ಸಿಕ್ಖ್ ರಾಜ್ಯ ಸ್ಥಾಪನೆ ಪ್ರತಿಪಾದಿಸಿರುವ ಪನ್ನೂನ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಹೊರಿಸಿದ್ದಾರೆ.
ಭಾರತದಿಂದ ಪರುಗ್ವೆಗೆ ಪ್ರಯಾಣಿಸುವ ವೇಳೆ ಝೆಕ್ ಅಧಿಕಾರಿಗಳು ಗುಪ್ತಾನನ್ನು ಕಳೆದ ವರ್ಷದ ಜೂನ್ ನಲ್ಲಿ ಬಂಧಿಸಿದ್ದರು. ತನ್ನ ಗುರುತನ್ನು ತಪ್ಪಾಗಿ ಭಾವಿಸಲಾಗಿದೆ. ಅಮೆರಿಕ ಹುಡುಕುತ್ತಿರುವ ವ್ಯಕ್ತಿ ತಾನು ಅಲ್ಲ. ಇದು ರಾಜಕೀಯ ಪ್ರಕರಣ ಎಂದು ಎಂದು ಗುಪ್ತಾ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಗಡೀಪಾರನ್ನು ತಡೆಯಲು ಸಂಭಾವ್ಯ ಎಲ್ಲ ಹೆಜ್ಜೆಗಳನ್ನು ಗುಪ್ತಾ ಇಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಕೆಳಹಂತದ ನ್ಯಾಯಾಲಯದ ನಿರ್ಧಾರದ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ, ಸುಪ್ರೀಂಕೋರ್ಟ್ ಮೊರೆ ಹೋಗಲು ಸಚಿವರಿಗೆ ಮೂರು ತಿಂಗಳ ಕಾಲಾವಕಾಶ ಇರುತ್ತದೆ.