ಅಫ್ಘಾನ್‍ನ 30 ದಶಲಕ್ಷ ಜನತೆಗೆ ಮಾನವೀಯ ನೆರವಿನ ಅಗತ್ಯವಿದೆ: ಯುನಿಸೆಫ್ ವರದಿ

Update: 2023-07-29 19:03 GMT

ಜಿನೆವಾ, ಜು.29: ಅಫ್ಘಾನಿಸ್ತಾನದ 15 ದಶಲಕ್ಷಕ್ಕೂ ಅಧಿಕ ಜನತೆಗೆ ಈ ವರ್ಷದ ಅಕ್ಟೋಬರ್‍ ವರೆಗೆ ಆಹಾರ ಅಭದ್ರತೆ ಎದುರಾಗಲಿದ್ದು 29.2 ದಶಲಕ್ಷ ಜನತೆಗೆ ಮಾನವೀಯ ನೆರವಿನ ಅಗತ್ಯವಿದೆ ಎಂದು ಯುನಿಸೆಫ್ ವರದಿ ಮಾಡಿದೆ.

ಬರ ಪರಿಸ್ಥಿತಿ, ಪ್ರವಾಹಗಳು, ಅಭದ್ರತೆ, ತೀವ್ರ ಚಳಿಗಾಲ, ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆ, ಸ್ಥಳಾಂತರ ಇತ್ಯಾದಿ ಕಾರಣಗಳಿಂದ ಅಫ್ಘಾನ್‍ನ ಆರ್ಥಿಕ ಹಿಂಜರಿತ ಉಲ್ಬಣಿಸಿದೆ. ದುರ್ಬಲ ಜನರು ಇನ್ನಷ್ಟು ಅಂಚಿಗೆ ತಳ್ಳಲ್ಪಟ್ಟಿರುವ ಕಾರಣ 64%ದಷ್ಟು ಕುಟುಂಬಗಳು ತಮ್ಮ ಮೂಲ ಅಗತ್ಯವನ್ನು ಪೂರೈಸಲು ಅಸಮರ್ಥವಾಗಿದೆ. ಆದ್ದರಿಂದ ಈ ಆರ್ಥಿಕ ಬಿಕ್ಕಟ್ಟು ಮುಂದುವರಿಯುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ವರದಿ ಹೇಳಿದೆ.

ಮಹಿಳೆಯರು ಸರಕಾರೇತರ ಸಂಸ್ಥೆಗಳು(ಎನ್‍ಜಿಒ) ಮತ್ತು ವಿಶ್ವಸಂಸ್ಥೆಯ ನೆರವು ಒದಗಿಸುವ ಸಂಸ್ಥೆಗಳಲ್ಲಿ ಮಹಿಳೆಯರು ಕೆಲಸ ಮಾಡುವುದಕ್ಕೆ ಇರುವ ನಿರ್ಬಂಧಗಳು ದುರ್ಬಲ ಮಹಿಳೆಯರು ಮತ್ತು ಮಕ್ಕಳ ಭದ್ರತೆ ಕುರಿತ ಬೆದರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯರಲ್ಲಿ ಅತ್ಯುತ್ತಮ ಪ್ರತಿಭೆಗಳಿವೆ ಮತ್ತು ಅವರು ಸಾಮಾಜಿಕ ಕ್ಷೇತ್ರ ಮತ್ತು ಕೆಲಸದ ಸ್ಥಳಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸಬಹುದು. ದುರದೃಷ್ಟವಶಾತ್ ಈಗಿನ ಸರಕಾರವು ದೇಶದಲ್ಲಿನ ಈ ಸಮಸ್ಯೆಯನ್ನು ಇದುವರೆಗೆ ಪರಿಹರಿಸಲು ಸಾಧ್ಯವಾಗಿಲ್ಲ ಎಂದು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮೂಲಭೂತ ಸೌಕರ್ಯಗಳಲ್ಲಿ ಜನತೆಗೆ ಹೆಚ್ಚಿನ ಸಮಸ್ಯೆ ಉಂಟಾಗಿರುವುದಷ್ಟೇ ಅಲ್ಲ ಮಹಿಳೆಯರ ಪರಿಸ್ಥಿತಿಯೂ ಹದಗೆಟ್ಟಿದೆ. ಮಹಿಳೆಯರಿಗೆ ನಾಯಕತ್ವದ ಹುದ್ದೆಗಳನ್ನು ನಿಷೇಧಿಸಲಾಗಿದೆ ಮತ್ತು ಪುರುಷ ಸಂಗಾತಿಯಿಲ್ಲದೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News