ನಿರ್ಬಂಧ ಎದುರಿಸಲು ಉತ್ತರ ಕೊರಿಯಾಕ್ಕೆ ನೆರವು : ವ್ಲಾದಿಮಿರ್ ಪುಟಿನ್ ವಾಗ್ದಾನ
ಪೋಂಗ್ಯಾಂಗ್ : ರಶ್ಯ ಮತ್ತು ಉತ್ತರ ಕೊರಿಯಾದ ಮೇಲಿನ ನಿರ್ಬಂಧಗಳನ್ನು ಎದುರಿಸಿ ಪಾಶ್ಚಿಮಾತ್ಯರ ಸ್ವಹಿತಾಸಕ್ತಿಯ ಕ್ರಮಗಳನ್ನು ದೃಢವಾಗಿ ವಿರೋಧಿಸಲು ರಶ್ಯವು ಉತ್ತರ ಕೊರಿಯಾಕ್ಕೆ ನೆರವಾಗಲಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಾಗ್ದಾನ ನೀಡಿದ್ದಾರೆ.
ಉತ್ತರ ಕೊರಿಯಾಕ್ಕೆ ಎರಡು ದಿನಗಳ ಭೇಟಿಗಾಗಿ ಮಂಗಳವಾರ ಆಗಮಿಸಿದ ಪುಟಿನ್, ರಾಜಧಾನಿ ಪೋಂಗ್ಯಾಂಗ್‍ನಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಹು-ಧ್ರುವೀಕೃತ ಜಾಗತಿಕ ವ್ಯವಸ್ಥೆಯನ್ನು ತಡೆಯುವ ಪಾಶ್ಚಿಮಾತ್ಯರ ಹಿತಾಸಕ್ತಿಯನ್ನು ವಿರೋಧಿಸಲು ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದರು. 24 ವರ್ಷಗಳಲ್ಲಿ ಇದು ಉತ್ತರ ಕೊರಿಯಾಕ್ಕೆ ಪುಟಿನ್ ಅವರ ಪ್ರಥಮ ಭೇಟಿಯಾಗಿದೆ.
ಅವರು ಜೂನ್ 19(ಬುಧವಾರ) ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜತೆಗೆ ಸಭೆ ನಡೆಸಲಿದ್ದಾರೆ. ಉಭಯ ಮುಖಂಡರು `ಆರ್ಥಿಕತೆ, ಇಂಧನ, ಸಾರಿಗೆ, ಕೃಷಿ, ಅಂತರ್ ಪ್ರಾದೇಶಿಕ ಸಂಬಂಧಗಳು, ಭದ್ರತಾ ಸಮಸ್ಯೆ ಹಾಗೂ ಅಂತರಾಷ್ಟ್ರೀಯ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ರಶ್ಯ ನಿಯೋಗದ ಮೂಲವನ್ನು ಉಲ್ಲೇಖಿಸಿ ರಶ್ಯದ ತಾಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷದ ಸೆಪ್ಟಂಬರ್‍ನಲ್ಲಿ ಕಿಮ್ ಜಾಂಗ್ ಉನ್ ರಶ್ಯಕ್ಕೆ ಭೇಟಿ ನೀಡಿದಂದಿನಿಂದ ಉಭಯ ದೇಶಗಳ ನಡುವಿನ ವ್ಯೂಹಾತ್ಮಕ ಸ್ನೇಹ ಹೆಚ್ಚಿದೆ. ರಶ್ಯವು ಉತ್ತರ ಕೊರಿಯಾಕ್ಕೆ ಉಪಗ್ರಹ ತಂತ್ರಜ್ಞಾನದ ಮಾಹಿತಿ ಒದಗಿಸುತ್ತಿದ್ದು ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ಶಸ್ತ್ರಾಸ್ತ್ರ ನೆರವು ನೀಡುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ಪ್ರತಿಪಾದಿಸುತ್ತಿವೆ. ಉಕ್ರೇನ್‍ನಲ್ಲಿ ದೊರೆತಿರುವ ಕ್ಷಿಪಣಿಗಳ ಚೂರುಗಳು, ಉಕ್ರೇನ್‍ನಲ್ಲಿ ರಶ್ಯವು ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿರುವುದನ್ನು ದೃಢಪಡಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ. ಉತ್ತರ ಕೊರಿಯಾವು ರಶ್ಯಕ್ಕೆ 11,000 ಕಂಟೈನರ್ ಗಳಲ್ಲಿ ಮದ್ದುಗುಂಡುಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒದಗಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.
ರಶ್ಯ-ಉತ್ತರ ಕೊರಿಯಾ ನಡುವಿನ ಸಂಬಂಧ ಅಭಿವೃದ್ಧಿಗೊಳ್ಳುತ್ತಿರುವುದು ಉಕ್ರೇನ್ ಜನರ ಮೇಲಷ್ಟೇ ಅಲ್ಲ, ಕೊರಿಯಾ ಪರ್ಯಾಯ ದ್ವೀಪದ ಜನಜೀವನದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.