ಇಸ್ರೇಲ್ ನಿಂದ ವೈಮಾನಿಕ ದಾಳಿ | ಬೈರೂತ್ ನಲ್ಲಿ ವ್ಯಾಪಕ ಹಾನಿ
ಬೈರೂತ್ : ದಕ್ಷಿಣ ಲೆಬನಾನ್ ನ ಬೈರೂತ್ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಆದರೆ ದೇಶದ ಏಕೈಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಒಳಭಾಗಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಲೆಬನಾನ್ ನ ಸಾರಿಗೆ ಇಲಾಖೆ ಗುರುವಾರ ಹೇಳಿದೆ.
ಇಸ್ರೇಲ್ ನ ಕ್ಷಿಪಣಿ ಬೈರೂತ್ ಅಂತರಾಷ್ಟ್ರೀಯ ವಿಮಾನದ ಬಳಿ ಅಪ್ಪಳಿಸಿದೆ ಎಂದು ಬುಧವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ದಾಳಿಯಲ್ಲಿ ವಿಮಾನ ನಿಲ್ದಾಣದ ಬಳಿಯಿರುವ ಕೆಲವು ಕಟ್ಟಡಗಳಿಗೆ ಹಾಗೂ ವಿಮಾನ ನಿಲ್ದಾಣದ ಕಂಪೌಂಡ್ ನ ಪಕ್ಕದಲ್ಲಿರುವ ಕಾರ್ಖಾನೆಗೆ ಹಾನಿಯಾಗಿದೆ. ಆದರೆ ವಿಮಾನ ನಿಲ್ದಾಣದ ಟರ್ಮಿನಲ್‍ಗೆ ಯಾವುದೇ ಹಾನಿಯಾಗಿಲ್ಲ ಮತ್ತು ವಿಮಾನ ನಿಲ್ದಾಣ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಲೆಬನಾನ್ ನ ಸಾರಿಗೆ ಇಲಾಖೆ ಹೇಳಿದೆ. ಈ ಮಧ್ಯೆ, ಬುಧವಾರ ಇಸ್ರೇಲ್ ನ ಬೆನ್ ಗ್ಯುರಿಯಾನ್ ವಿಮಾನ ನಿಲ್ದಾಣದ ಸಮೀಪವಿರುವ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಘೋಷಿಸಿದೆ.