ಇಸ್ರೇಲ್ ಸೇನೆಯ ರಫಾ ದಾಳಿಗೆ ಅಮೆರಿಕ ಖಂಡನೆ | ಆದರೆ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ : ವಾಷಿಂಗ್ಟನ್ ಸ್ಪಷ್ಟನೆ
ವಾಶಿಂಗ್ಟನ್ : ರಫಾದಲ್ಲಿ ರವಿವಾರ ನಡೆದ ಇಸ್ರೇಲ್ ವಾಯುದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆಯನ್ನು ಶ್ವೇತಭವನವು ಮಂಗಳವಾರ ಖಂಡಿಸಿದೆ. ಆದರೆ ಇಸ್ರೇಲ್‌ನ ಈ ಕೃತ್ಯಗಳಿಗಾಗಿ ತನ್ನ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಯೋಜನೆ ಇಲ್ಲವೆಂದು ಅದು ಸ್ಪಷ್ಟಪಡಿಸಿದೆ.
ಇಸ್ರೇಲ್ ದಕ್ಷಿಣ ಗಾಝಾದ ನಗರವಾದ ರಫಾದಲ್ಲಿ ಪೂರ್ಣ ಮಟ್ಟದ ಭೂ ದಾಳಿಯನ್ನು ನಡೆಸುವುದಿಲ್ಲವೆಂದು ಅಮೆರಿಕಕ್ಕೆ ಮನವರಿಕೆಯಾಗಿರುವುದರಿಂದ ಭವಿಷ್ಯದಲ್ಲಿ ಆ ದೇಶಕ್ಕೆ ಆಕ್ರಮಣಕಾರಿ ಅಸ್ತ್ರಗಳನ್ನು ವರ್ಗಾವಣೆ ಮಾಡುವುದನ್ನು ತಡೆಹಿಡಿಯಲಾಗುವುದಿಲ್ಲವೆಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಇಲಾಖೆಯ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.
ರವಿವಾರ ರಫಾದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಶಿಬಿರಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ್ದು, ಕನಿಷ್ಠ 47 ಮಂದಿ ಸಾವನ್ನಪ್ಪಿದ್ದರು.
ರಫಾದಲ್ಲಿ ರವಿವಾರ ನಡೆಸಿದ ವಾಯುದಾಳಿಯು ಒಂದು ದುರಂತಮಯ ದುರ್ಘಟನೆಯೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ರಫಾದಲ್ಲಿ ರವಿವಾರ ಇಸ್ರೇಲ್ ನಡೆಸಿದ ವಾಯುದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಸ್ರೇಲ್‌ನ ಈ ದಾಳಿಯನ್ನು ಅದರ ಆಪ್ತ ರಾಷ್ಟ್ರಳು ಕೂಡಾ ತೀವ್ರವಾಗಿ ಖಂಡಿಸಿವೆ.
ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಾಕ್ರೊನ್ ಆಗ್ರಹಿಸಿದ್ದಾರೆ. ‘‘ ಇಸ್ರೇಲ್ ರಫಾದಲ್ಲಿ ನಡೆಸಿದ ದಾಳಿಯ ಚಿತ್ರಗಳನ್ನು ನೋಡಲು ಸಾಧ್ಯವಿಲ್ಲ ಹಾಗೂ ನಾಗರಿಕರಿಗೆ ಉತ್ತಮವಾದ ರಕ್ಷಣೆ ದೊರೆಯಬೇಕಾಗಿದೆ ’’ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಫಾ ದಾಳಿಯು ಶಾಂತಿ ಮಾತುಕತೆಯನ್ನು ಜಟಿಲಗೊಳಿಸಿದೆ ಎಂದು ಖತರ್ ಹೇಳಿದೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನವಿರಾಮವನ್ನು ಏರ್ಪಡಿಸಲು ಹಾಗೂ ಹಮಾಸ್‌ನ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಪ್ರಯತ್ನದಲ್ಲಿ ಖತರ್ ಸಂಧಾನಕಾರನಾಗಿದೆ.
ರಫಾದಲ್ಲಿ ಸೇನಾ ಕಾರ್ಯಾಚರಣೆಯನ್ನು ಕೊನೆಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್‌ಗೆ ಆದೇಶಿಸಿದ ಎರಡು ದಿನಗಳ ಬಳಿಕ ರಫಾ ಮೇಲೆ ಆಕ್ರಮಣ ನಡೆದಿದೆ. ಗಾಝಾದ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದ ಬಳಿಕ ರಫಾದಲ್ಲಿ 20.30 ಲಕ್ಷ ಜನರು ಆಶ್ರಯಪಡೆದುಕೊಂಡಿದ್ದಾರೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.