ಉಕ್ರೇನ್ ನ ಮತ್ತೊಂದು ನಗರ ರಶ್ಯದ ವಶಕ್ಕೆ: ವರದಿ
ಮಾಸ್ಕೊ: ಪೂರ್ವ ಉಕ್ರೇನ್‍ನ ಅವದಿವ್ಕಾದ ಮೇಲೆ ರಶ್ಯದ ಪಡೆಗಳು ಸಂಪೂರ್ಣ ನಿಯಂತ್ರಣವನ್ನು ಪಡೆದಿದ್ದು ಇದೊಂದು ಪ್ರಮುಖ ಗೆಲುವಾಗಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ.
ಸುಮಾರು 10 ತಿಂಗಳ ಬಳಿಕ ರಶ್ಯದ ಪಡೆಗೆ ದೊರಕಿದ ಪ್ರಮುಖ ಗೆಲುವು ಇದಾಗಿದೆ. ಕಳೆದ ಮೇ ತಿಂಗಳಿನಲ್ಲಿ ರಶ್ಯ ಪಡೆ ಬಾಖ್‍ಮಟ್ ನಗರವನ್ನು ವಶಪಡಿಸಿಕೊಂಡಿತ್ತು. ಉಕ್ರೇನ್‍ಗೆ ಶಸ್ತ್ರಾಸ್ತ್ರ ನೆರವು ಒದಗಿಸುವ ಪ್ರಸ್ತಾವನೆ ಅಮೆರಿಕ ಸಂಸತ್‍ನಲ್ಲಿ ಸ್ಥಗಿತಗೊಂಡ ಬಳಿಕ ಉಕ್ರೇನ್‍ಗೆ ಶಸ್ತ್ರಾಸ್ತ್ರಗಳ ತೀವ್ರ ಕೊರತೆ ಎದುರಾಗಿದೆ. ಉಕ್ರೇನ್‍ಗೆ ಸಕಾಲದಲ್ಲಿ ಶಸ್ತ್ರಾಸ್ತ್ರ ಒದಗಿಸದಿದ್ದರೆ ಅವದಿವ್ಕಾವನ್ನು ರಶ್ಯಾ ವಶಪಡಿಸಿಕೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ, ಜರ್ಮನಿಯ ಮ್ಯೂನಿಚ್‍ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ಶಸ್ತ್ರಾಸ್ತ್ರಗಳ ಕೊರತೆಯಿಂದಾಗಿ ತಮ್ಮ ಪಡೆ ಅವದಿವ್ಕಾದಿಂದ ಹಿಂದೆ ಸರಿಯಬೇಕಾಯಿತು ಎಂದರು ಮತ್ತು ಪಾಶ್ಚಿಮಾತ್ಯರು ಶಸ್ತ್ರಾಸ್ತ್ರಗಳನ್ನು ಒದಗಿಸದಿದ್ದರೆ ಶತ್ರುಗಳ ಕೈ ಮೇಲಾಗಬಹುದು ಎಂದಿದ್ದಾರೆ.
ತಮ್ಮ ಪಡೆಗಳು ಅವದಿವ್ಕಾದಿಂದ ಹಿಂದೆ ಸರಿದಿದ್ದು ನಗರದ ಹೊರಗೆ ಆಯಕಟ್ಟಿನ ಸ್ಥಾನ ತಲುಪಿವೆ. ಅವದಿವ್ಕಾವನ್ನು ರಶ್ಯ ಪಡೆ ಮುತ್ತಿದ್ದರಿಂದ ನಾಗರಿಕರ ಜೀವಕ್ಕೆ ಹಾನಿಯಾಗುವುದನ್ನು ತಪ್ಪಿಸಲು ತಮ್ಮ ಸೇನೆ ನಗರದಿಂದ ಹಿಂದೆ ಸರಿದಿದೆ ಎಂದು ಉಕ್ರೇನ್ ಸೇನೆಯ ನೂತನ ಮುಖಂಡ ಕ|ಜ| ರಸ್ಟರ್ನ್ ಉಮೆರೋವ್ ಹೇಳಿಕೆ ನೀಡಿದ್ದಾರೆ.