ರಶ್ಯದ ಮತ್ತೊಂದು ಯುದ್ಧನೌಕೆ ನಾಶಗೊಳಿಸಿದ ಉಕ್ರೇನ್ : ವರದಿ
ಕೀವ್ : ರಶ್ಯ ಸ್ವಾಧೀನಪಡಿಸಿಕೊಂಡಿರುವ ಕ್ರಿಮಿಯಾ ಪ್ರಾಂತದ ಕೆರ್ಚ್ ಜಲಸಂಧಿಯ ಬಳಿ ಕಪ್ಪು ಸಮುದ್ರದಲ್ಲಿ ರಶ್ಯದ ಮಿಲಿಟರಿ ಗಸ್ತು ಹಡಗನ್ನು ನಾಶಗೊಳಿಸಿರುವುದಾಗಿ ಉಕ್ರೇನ್ ಹೇಳಿದೆ.
ಅಲ್ಲದೆ ರಶ್ಯದ ಗಡಿಭಾಗದ ಪ್ರದೇಶದಲ್ಲಿ ತೈಲ ಡಿಪೋದ ಮೇಲೆ ಡ್ರೋನ್ ದಾಳಿಯನ್ನೂ ತನ್ನ ಪಡೆಗಳು ನಡೆಸಿವೆ. ಇದು ರಶ್ಯದ ಮೇಲೆ ಆಕಾಶದಿಂದ ಮತ್ತು ಸಮುದ್ರದ ಮೂಲಕ ದಾಳಿ ಮಾಡುವ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ. ಇನ್ನು ಮುಂದೆ ರಶ್ಯನ್ನರಿಗೆ ಯಾವುದೇ ಸುರಕ್ಷಿತ ಬಂದರುಗಳಿಲ್ಲ. ಕಪ್ಪು ಸಮುದ್ರದಲ್ಲಿ ಅಂತೂ ಇಲ್ಲವೇ ಇಲ್ಲ' ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ. 308 ಅಡಿ ಉದ್ದದ ರಶ್ಯದ ಸೆರ್ಗೆಯ್ ಕೊಟೋವ್ ಮಿಲಿಟರಿ ಗಸ್ತುನೌಕೆಯ ಬಳಿ ಉಕ್ರೇನ್ ನೌಕಾಪಡೆಯ ಡ್ರೋನ್ ಬರುತ್ತಿರುವುದು ಹಾಗೂ ಕೆಲವೇ ಕ್ಷಣಗಳಲ್ಲಿ ನೌಕೆಯಲ್ಲಿ ಸ್ಫೋಟ ಸಂಭವಿಸುವ ವೀಡಿಯೊವನ್ನು ಉಕ್ರೇನ್ ಸೇನೆ ಬಿಡುಗಡೆಗೊಳಿಸಿದೆ. `ಮತ್ತೊಂದು ಅತ್ಯಂತ ಯಶಸ್ವೀ ಕಾರ್ಯಾಚರಣೆ. ಒಳ್ಳೆಯ ಸುದ್ಧಿ' ಎಂದು ಉಕ್ರೇನ್‍ನ ಮಿಲಿಟರಿ ಗುಪ್ತಚರ ಸೇವೆಯ ವಕ್ತಾರ ಆಂಡ್ರಿಯ್ ಯುಸೋವ್ ಪ್ರತಿಕ್ರಿಯಿಸಿದ್ದಾರೆ.
2022ರ ಫೆಬ್ರವರಿಯಲ್ಲಿ ರಶ್ಯದ ದಾಳಿ ಆರಂಭವಾದಂದಿನಿಂದ ರಶ್ಯದ ಸುಮಾರು 25 ಹಡಗುಗಳನ್ನು ನಾಶಗೊಳಿಸಿರುವುದಾಗಿ ಉಕ್ರೇನ್ ಸೇನೆ ಪ್ರತಿಪಾದಿಸಿದೆ.