ಅಮೆರಿಕ: ಚೀನಾಕ್ಕೆ ಮಿಲಿಟರಿ ರಹಸ್ಯ ಒದಗಿಸುತ್ತಿದ್ದ ಆರೋಪ; ಯೋಧನ ಸೆರೆ
ವಾಶಿಂಗ್ಟನ್: ಅಮೆರಿಕದ ರಾಷ್ಟ್ರೀಯ ರಕ್ಷಣಾ ಮಾಹಿತಿಗಳನ್ನು ಚೀನಾಕ್ಕೆ ಒದಗಿಸುತ್ತಿದ್ದ ಆರೋಪದಲ್ಲಿ ಅಮೆರಿಕ ಸೇನೆಯ ಗುಪ್ತಚರ ವಿಶ್ಲೇಷಕ ಕೊರ್ಬಿಯನ್ ಷುಲ್ಟ್‍ನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಸರ್ಜಂಟ್ ಕೊರ್ಬಿಯನ್‍ನನ್ನು ಅತ್ಯಂತ ಮಹತ್ವದ ರಹಸ್ಯ ದಾಖಲೆಯ ಸಹಿತ ಕೆಂಟುಕಿ-ಟೆನೆಸ್ಸೀ ಗಡಿಭಾಗದಲ್ಲಿರುವ ಸೇನಾನೆಲೆ ಫೋರ್ಟ್ ಕ್ಯಾಂಪ್‍ಬೆಲ್‍ನಲ್ಲಿ ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಒದಗಿಸಲಾಗಿದೆ ಎಂದು ಅಮೆರಿಕದ ನ್ಯಾಯ ಇಲಾಖೆ ವರದಿ ಮಾಡಿದೆ.
2022ರ ಜೂನ್‍ನಿಂದ ಅಮೆರಿಕದ ರಾಷ್ಟ್ರೀಯ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳು, ನಕ್ಷೆಗಳು, ಫೋಟೊಗಳ ಸಹಿತ ಸೂಕ್ಷ್ಮ ಮಾಹಿತಿಗಳನ್ನು ಈತ ಹಾಂಕಾಂಗ್‍ನಲ್ಲಿರುವ ವ್ಯಕ್ತಿಗೆ ಒದಗಿಸಿದ್ದು ಇದಕ್ಕೆ 42,000 ಡಾಲರ್ ಹಣ ಪಡೆದಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚೀನಾದ ಹೆಸರನ್ನು ಉಲ್ಲೇಖಿಸಿಲ್ಲ. ಈತ ಚೀನಾದ ಪರ ಕೆಲಸ ಮಾಡುತ್ತಿದ್ದ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ. ಒಂದು ವೇಳೆ ತೈವಾನ್ ಮಿಲಿಟರಿ ಆಕ್ರಮಣಕ್ಕೆ ಒಳಗಾದರೆ ಆಗ ಅಮೆರಿಕದ ಯೋಜನೆಗಳ ವಿವರ ಈ ದಾಖಲೆಗಳಲ್ಲಿ ಸೇರಿದೆ. ಜತೆಗೆ, ಯುದ್ಧವಿಮಾನ, ಹೆಲಿಕಾಪ್ಟರ್‍ಗಳು, ಹೈಪರ್‍ಸಾನಿಕ್ ಅಸ್ತ್ರಗಳು, `ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್, ಅಮೆರಿಕ ಮತ್ತು ಚೀನಾದ ಮಿಲಿಟರಿಗಳ ಕುರಿತ ಅಧ್ಯಯನ ವರದಿಯನ್ನೂ ಕೊರ್ಬಿಯನ್ ಷುಲ್ಟ್ ಒದಗಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಗೂಗಲ್‍ನಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಕದಿಯಲು ಪ್ರಯತ್ನಿಸಿದ್ದ ಆರೋಪದಲ್ಲಿ ಚೀನಾದ ಸಾಫ್ಟ್‍ವೇರ್ ಇಂಜಿನಿಯರ್‍ನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು. ಚೀನಾಕ್ಕೆ ರಹಸ್ಯ ಮಿಲಿಟರಿ ಮಾಹಿತಿ ಒದಗಿಸುತ್ತಿದ್ದ ಆರೋಪದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಅಮೆರಿಕ ನೌಕಾಪಡೆಯ ಇಬ್ಬರು ಸಿಬ್ಬಂದಿಯನ್ನು ಕಳೆದ ವಾರ ಬಂಧಿಸಲಾಗಿದೆ.
ಚೀನಾದ ವಿರುದ್ಧ ಅಮೆರಿಕ ಮಾಡಿರುವ ಆರೋಪಗಳು ಆಧಾರ ರಹಿತವಾಗಿದೆ. ಚೀನಾವನ್ನು ನಿಗ್ರಹಿಸುವ ಏಕೈಕ ಉದ್ದೇಶದಿಂದ ಅಮೆರಿಕ ಇಂತಹ ಹೇಳಿಕೆ ನೀಡುತ್ತಿದೆ ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಮಾವೊ ನಿಂಗ್ ಪ್ರತಿಕ್ರಿಯಿಸಿದ್ದಾರೆ.