ಇಸ್ರೇಲ್ ವೈಮಾನಿಕ ದಾಳಿಯಿಂದ ಗಾಝಾದಲ್ಲಿ 4 ಲಕ್ಷ ಜನರ ಸ್ಥಳಾಂತರ ; ವಿಶ್ವಸಂಸ್ಥೆ ವರದಿ

Update: 2023-10-13 17:42 GMT

ಜಿನೆವಾ: ಹಮಾಸ್ ದಾಳಿಗೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸುತ್ತಿರುವ ಬಾಂಬ್ ಗಳ ಸುರಿಮಳೆಯಿಂದ 4,23,000ಕ್ಕೂ ಅಧಿಕ ಜನರು ತಮ್ಮ ಮನೆ ಬಿಟ್ಟು ಪಲಾಯನ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

‘ಆಗಸ, ಸಮುದ್ರ ಮತ್ತು ಭೂಮಿಯಿಂದ ಇಸ್ರೇಲ್ ನ ಭೀಕರ ಬಾಂಬ್ ದಾಳಿ ಬಹುತೇಕ ಅಡೆತಡೆಯಿಲ್ಲದೆ ಮುಂದುವರಿದಿದೆ. ಶುಕ್ರವಾರದ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ ಜನನಿಬಿಡ ಪ್ರದೇಶದ ಜನವಸತಿ ಕಟ್ಟಡಗಳನ್ನು ಗುರಿಯಾಗಿಸಿ ನಾಶಗೊಳಿಸಲಾಗಿದೆ ’ ಎಂದು ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಏಜೆನ್ಸಿ(ಒಸಿಎಚ್ಎ) ಹೇಳಿದೆ.

ಸ್ಥಳಾಂತರಗೊಂಡವರಲ್ಲಿ ಮೂರನೇ ಎರಡರಷ್ಟು ಮಂದಿ, ಅಂದರೆ 2,70,000ಕ್ಕೂ ಹೆಚ್ಚಿನವರು ಯುಎನ್ಆರ್ಡಬ್ಲ್ಯೂಎ(ಫೆಲೆಸ್ತೀನಿಯನ್ ನಿರಾಶ್ರಿತರಿಗೆ ನೆರವಾಗುವ ವಿಶ್ವಸಂಸ್ಥೆ ಏಜೆನ್ಸಿ) ನಿರ್ವಹಿಸುವ ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಇತರ 27,000 ಜನರು ಫೆಲೆಸ್ತೀನಿಯನ್ ಅಥಾರಿಟಿ(ಪಿಎ) ನಿರ್ವಹಿಸುವ ಶಾಲೆಗಳಲ್ಲಿ ಆಶ್ರಯ ಪಡೆದಿದ್ದರೆ 1,53,000ಕ್ಕೂ ಅಧಿಕ ಜನರು ಇತರ ಸಾರ್ವಜನಿಕ ಕಟ್ಟಡಗಳಲ್ಲಿ, ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಒಸಿಎಚ್ಎ ಮಾಹಿತಿ ನೀಡಿದೆ.

ಬಾಂಬ್ ದಾಳಿಯ ಕಾರ್ಯಾಚರಣೆಯಿಂದ ಗಾಝಾ ಪಟ್ಟಿಯ 2,835 ವಸತಿ ಘಟಕವನ್ನು ಒಳಗೊಂಡಿರುವ 752 ವಸತಿ ಮತ್ತು ವಸತಿಯೇತರ ಕಟ್ಟಡಗಳು ನಾಶಗೊಂಡಿವೆ. ಇತರ ಸುಮಾರು 1,800 ವಸತಿ ಘಟಕಗಳು ದುರಸ್ತಿ ಮಾಡಲಾಗದಷ್ಟು ಹಾನಿಗೊಂಡಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ನಾಗರಿಕ ಮೂಲಸೌಕರ್ಯ ವ್ಯವಸ್ಥೆಗಳು ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ. ಯುಎನ್ಆರ್ಡಬ್ಲ್ಯೂಎ ನಿರ್ವಹಿಸುವ 20 ಶಾಲೆಗಳು, ಪಿಎ ನಿರ್ವಹಿಸುವ 70 ಶಾಲೆಗಳು ಸೇರಿದಂತೆ ಕನಿಷ್ಟ 90 ಶೈಕ್ಷಣಿಕ ಸೌಲಭ್ಯಗಳಿಗೆ ಹಾನಿಯಾಗಿದೆ ಮತ್ತು ಒಂದು ಶಾಲೆ ಸಂಪೂರ್ಣವಾಗಿ ನಾಶಗೊಂಡಿದೆ. 11 ಮಸೀದಿಗಳು ನಾಶಗೊಂಡಿದ್ದರೆ 7 ಚರ್ಚ್ಗಳು ಹಾಗೂ 1 ಮಸೀದಿಗೆ ಹಾನಿಯಾಗಿದೆ. ಗಾಝಾ ಪ್ರದೇಶದ ನೀರು ಪೂರೈಕೆ ಹಾಗೂ ನೈರ್ಮಲ್ಯ ಸೌಲಭ್ಯಗಳಿಗೂ ಹಾನಿಯಾಗಿದೆ. 6 ಬಾವಿಗಳು, 3 ನೀರು ಪಂಪ್ ಮಾಡುವ ಕೇಂದ್ರಗಳು, ಒಂದು ಜಲಾಶಯಕ್ಕೆ ಹಾನಿಯಾಗಿದೆ. 1,100,000ಕ್ಕೂ ಅಧಿಕ ಜನರಿಗೆ ಕುಡಿಯುವ ನೀರು ಒದಗಿಸುವ ನಿರ್ಲವಣೀಕರಣ(ನೀರಿನಿಂದ ಉಪ್ಪಿನ ಅಂಶ ಬೇರ್ಪಡಿಸುವ ಘಟಕ) ಘಟಕ ವಾಯುದಾಳಿಯಿಂದ ಹಾನಿಗೊಂಡಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News