ಇಂಡೊ- ಪೆಸಿಫಿಕ್ ದೃಷ್ಟಿಕೋನಕ್ಕೆ `ಆಸಿಯಾನ್' ಮೂಲಾಧಾರ : ವಿದೇಶಾಂಗ ಸಚಿವ ಎಸ್.ಜೈಶಂಕರ್
ವಿಯೆಂಟಿಯಾನ್ : ಭಾರತದ `ಆ್ಯಕ್ಟ್ ಈಸ್ಟ್' ನೀತಿ ಹಾಗೂ ಇಂಡೊ-ಪೆಸಿಫಿಕ್ ದೃಷ್ಟಿಕೋನಕ್ಕೆ ಆಗ್ನೇಯ ಏಶ್ಯಾ ರಾಷ್ಟ್ರಗಳ ಸಂಘಟನೆ(ಆಸಿಯಾನ್) ಮೂಲಾಧಾರವಾಗಿದೆ. ಆಸಿಯಾನ್ ಸದಸ್ಯ ದೇಶಗಳ ಜತೆಗಿನ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸಹಕಾರ ಸಂಬಂಧವನ್ನು ಹೆಚ್ಚಿಸಲು ಭಾರತ ಬಯಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಹೇಳಿದ್ದಾರೆ.
ಲಾವೋಸ್ ದೇಶದ ರಾಜಧಾನಿ ವಿಯೆಂಟಿಯಾನ್ ನಲ್ಲಿ ನಡೆಯುತ್ತಿರುವ ಆಸಿಯಾನ್ ದೇಶಗಳ ಸಭೆಯಲ್ಲಿ ಎಸ್. ಜೈಶಂಕರ್ಪಾಲ್ಗೊಂಡಿದ್ದಾರೆ. ಆಸಿಯಾನ್- ಭಾರತ ವಿದೇಶಾಂಗ ಸಚಿವರ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ `ಆಸಿಯಾನ್ನೊಂದಿಗೆ ಪ್ರಸ್ತುತ ರಾಜಕೀಯ, ಭದ್ರತಾ ಮತ್ತು ಆರ್ಥಿಕ ಸಹಕಾರವು ಭಾರತದ ಪ್ರಮುಖ ಆದ್ಯತೆಯಾಗಿದೆ, ಅಂತೆಯೇ ಜನರಿಂದ ಜನರ ನಡುವಿನ ಸಂಪರ್ಕವನ್ನೂ ನಿರಂತರ ಹೆಚ್ಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತ-ಆಸಿಯಾನ್ ಪಾಲುದಾರಿಕೆಯು ದಿನ ಕಳೆದಂತೆಲ್ಲಾ ಹೊಸ ಆಯಾಮಗಳನ್ನು ಪಡೆಯುತ್ತಿದೆ ಮತ್ತು ವಿಸ್ತರಿಸುತ್ತಿದೆ' ಎಂದರು. 2014ರಲ್ಲಿ ನಡೆದ 9ನೇ ಪೂರ್ವ ಏಶ್ಯಾ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ `ಆ್ಯಕ್ಟ್ ಈಸ್ಟ್' ಕಾರ್ಯನೀತಿಯ 10ನೇ ವರ್ಷದ ಸಂದರ್ಭದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಜೈಶಂಕರ್ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ನ್ಯೂಝಿಲ್ಯಾಂಡ್ನ ವಿದೇಶಾಂಗ ಸಚಿವ ವಿನ್ಸ್ಟನ್ ಪೀಟರ್ಸ್ರನ್ನು ಭೇಟಿಮಾಡಿ ಶಿಕ್ಷಣ, ಕೃಷಿ ತಂತ್ರಜ್ಞಾನ, ಪೆಸಿಫಿಕ್ ದ್ವೀಪಗಳು ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
`ಆ್ಯಕ್ಟ್ ಈಸ್ಟ್' ಕಾರ್ಯನೀತಿ ವಿಶಾಲವಾದ ಏಶ್ಯಾ ಪೆಸಿಫಿಕ್ ಪ್ರದೇಶಗಳೊಂದಿಗೆ ವಿವಿಧ ಹಂತಗಳಲ್ಲಿ ಆರ್ಥಿಕ, ಕಾರ್ಯತಂತ್ರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸಲು ರಾಜತಾಂತ್ರಿಕ ಉಪಕ್ರಮವಾಗಿದೆ. ಭಾರತವು ಸ್ವತಂತ್ರ, ಮುಕ್ತ, ಅಂತರ್ಗತ, ಶಾಂತಿಯುತ ಮತ್ತು ಸಮೃದ್ಧ ಇಂಡೊ-ಪೆಸಿಫಿಕ್ ವಲಯದ ಪರಿಕಲ್ಪನೆಯನ್ನು ಹೊಂದಿದೆ. ಇಂಡೊನೇಶ್ಯಾ, ಮಲೇಶ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಥೈಲ್ಯಾಂಡ್, ಬ್ರೂನೈ, ವಿಯೆಟ್ನಾಮ್, ಲಾವೋಸ್, ಮ್ಯಾನ್ಮಾರ್ ಮತ್ತು ಕಂಬೋಡಿಯಾ ಇವು ಆಸಿಯಾನ್ ಒಕ್ಕೂಟದ 10 ಸದಸ್ಯ ದೇಶಗಳಾಗಿವೆ