ಸಿರಿಯಾ ಸೇನಾ ಅಕಾಡೆಮಿ ಮೇಲೆ ಡ್ರೋನ್ ದಾಳಿ: ಕನಿಷ್ಠ 100 ಮಂದಿ ಮೃತ್ಯು

Update: 2023-10-06 03:02 GMT

Photo: Twitter

ಸಿರಿಯಾ: ಇಲ್ಲಿನ ಸೇನಾ ಅಕಾಡೆಮಿ ಮೇಲೆ ಗುರುವಾರ ಭೀಕರ ಡ್ರೋಣ್ ದಾಳಿ ನಡೆದಿದ್ದು, ಕನಿಷ್ಠ 100 ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಸರ್ಕಾರಿ ಸ್ವಾಮ್ಯದ ಮನೆಗಳ ಮೇಲೆ ನಡೆದ ಈ ಭೀಕರ ದಾಳಿಯ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ ಎಂದು ಸರ್ಕಾರಿ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.

ಪ್ರತ್ಯೇಕ ಘಟನೆಯಲ್ಲಿ ಟರ್ಕಿ ಯುದ್ಧಪೀಡಿದ ದೇಶದ ಖುರ್ದಿಶ್ ವಶದಲ್ಲಿರುವ ಈಶಾನ್ಯ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಬಾಂಬ್ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸುವುದಾಗಿ ಅಂಕಾರಾ ಈ ಮುನ್ನ ಎಚ್ಚರಿಕೆ ನೀಡಿತ್ತು.

ಸಿರಿಯನ್ ಸಿಟಿ ಆಫ್ ಹೋಮ್ಸ್ನಲ್ಲಿ ಸಶಸ್ತ್ರ ಉಗ್ರಗಾಮಿ ಸಂಘಟನೆಗಳು, ಸೇನಾ ಅಕಾಡೆಮಿಯ ಅಧಿಕಾರಿಗಳ ಘಟಿಕೋತ್ಸವ ಸಮಾರಂಭದ ವೇಳೆ ಈ ದಾಳಿ ನಡೆಸಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ಸನಾ ವರದಿ ಮಾಡಿದೆ.

ಬ್ರಿಟನ್ ಮೂಲದ ನಿಗಾ ಸಂಸ್ಥೆಯಾದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ, 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಪೈಕಿ ಅರ್ಧದಷ್ಟು ಮಂದಿ ಮಿಲಿಟರಿ ಪದವಿ ಪಡೆದವರು. 14 ಮಂದಿ ನಾಗರಿಕರೂ ದಾಳಿಯಲ್ಲಿ ಬಲಿಯಾಗಿದ್ದರೆ. ಈ ಘಟನೆಯಲ್ಲಿ ಕನಿಷ್ಠ 125 ಮಂದಿ ಗಾಯಗೊಂಡಿದ್ದಾರೆ ಎಂದು ಸಂಘಟನೆ ವಿವರ ನೀಡಿದೆ.

ಪ್ರಾಥಮಿಕ ಮಾಹಿತಿಯಂತೆ ಆರು ಮಂದಿ ಮಹಿಳೆಯರು ಮತ್ತು ಆರು ಮಕ್ಕಳು ಸೇರಿದಂತೆ 80 ಮಂದಿ ಮೃತಪಟ್ಟಿದ್ದಾರೆ. 240 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿ ಹಸನ್ ಅಲ್ ಘೋಬಶ್ ಹೇಳಿದ್ದಾರೆ.

ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಡ್ರೋಣ್ಗಳ ಮೂಲಕ ಸ್ಫೋಟಕಗಳನ್ನು ತಂದು ದಾಳಿ ನಡೆಸಲಾಗಿದೆ. ಇದಕ್ಕೆ ಸಂಪೂರ್ಣ ಬಲದೊಂದಿಗೆ ಪ್ರತಿಕ್ರಿಯಿಸಲಾಗುತ್ತಿದೆ ಎಂದು ಸೇನೆ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News