ಡೊನೆಟ್ಸ್ಕ್ ನಗರದ ಮೇಲೆ ಉಕ್ರೇನ್ ದಾಳಿ: 25 ಮಂದಿ ಸಾವು
ಮಾಸ್ಕೊ: ರಶ್ಯದ ಸ್ವಾಧೀನದಲ್ಲಿರುವ ಪೂರ್ವ ಉಕ್ರೇನ್‍ನ ಡೊನೆಟ್ಸ್ಕ್ ನಗರದ ಮೇಲೆ ಉಕ್ರೇನ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳ ಸಹಿತ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ನಗರದ ಮೇಯರ್ ಅಲೆಕ್ಸಿ ಕ್ಯುಲೆಮಿನ್ ರವಿವಾರ ಹೇಳಿದ್ದಾರೆ.
ಡೊನೆಟ್ಸ್ಕ್ ಹೊರವಲಯದ ತೆಕ್‍ಸ್ಟಿಲ್‍ಷಿಕ್ ನಗರದ ಮಾರುಕಟ್ಟೆ ಮತ್ತು ಸದಾ ಜನಸಂದಣಿ ಇರುವ ಪ್ರದೇಶದ ಮೇಲೆ ಉಕ್ರೇನ್ ವೈಮಾನಿಕ ದಾಳಿ ನಡೆಸಿದ್ದು 25 ಮಂದಿ ಸಾವನ್ನಪ್ಪಿದ್ದಾರೆ. ಅಂಗಡಿಗಳಿಗೆ ಭಾರೀ ಹಾನಿಯಾಗಿದ್ದು ತುರ್ತು ಸೇವಾ ತಂಡ ಸ್ಥಳಕ್ಕೆ ಧಾವಿಸಿ ಗಾಯಗೊಂಡ 20 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಸ್ಫೋಟಗೊಂಡ ಬಾಂಬ್‍ಗಳ ಚೂರನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ. ಡೊನೆಟ್ಸ್ಕ್ ಸಹಿತ ಉಕ್ರೇನ್‍ನ 4 ಪ್ರಾಂತಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ರಶ್ಯ ಕಳೆದ ವರ್ಷ ಹೇಳಿತ್ತು. ಆದರೆ ಇದು ಕಾನೂನುಬಾಹಿರ ಎಂದು ಅಂತರಾಷ್ಟ್ರೀಯ ಸಮುದಾಯ ಖಂಡಿಸಿದೆ.
ಈ ಮಧ್ಯೆ, ರಶ್ಯದ ಉಸ್ತ್-ಲುಗಾ ಬಂದರಿನ ರಾಸಾಯನಿಕ ಸಾರಿಗೆ ಟರ್ಮಿನಲ್‍ನಲ್ಲಿ ರವಿವಾರ ಎರಡು ಸ್ಫೋಟ ಸಂಭವಿಸಿದ್ದು ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡು ದುರಂತ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರವಿವಾರ ಬೆಳಿಗ್ಗೆ ಸೈಂಟ್ ಪೀಟರ್ಸ್‍ಬರ್ಗ್ ನಗರದ ಬಳಿ ಎರಡು ಡ್ರೋನ್‍ಗಳನ್ನು ಪತ್ತೆಹಚ್ಚಲಾಗಿದೆ. ಸ್ಮೊಲೆನ್ಸ್ಕ್ ಪ್ರಾಂತದಲ್ಲಿ ಉಕ್ರೇನ್‍ನ 4 ಡ್ರೋನ್‍ಗಳನ್ನು, ಒರ್ಯೋಲ್ ಪ್ರಾಂತದಲ್ಲಿ 2 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.