ಬಾಂಗ್ಲಾದೇಶ: ನಟ ಹಾಗೂ ಆತನ ತಂದೆಯನ್ನು ಥಳಿಸಿ ಹತ್ಯೆಗೈದ ಗುಂಪು
ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ ನಂತರ ದೇಶಾದ್ಯಂತ ಅರಾಜಕತೆ ತಲೆದೋರಿದ್ದು, ಸೋಮವಾರ ರಾತ್ರಿ ಬಾಂಗ್ಲಾದೇಶಿ ನಟ ಶಾಂತೊ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅವರನ್ನು ಉದ್ರಿಕ್ತ ಗುಂಪೊಂದು ಥಳಿಸಿ ಹತ್ಯೆಗೈದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಖ್ಯಾತ ನಿರ್ಮಾಣ ಸಂಸ್ಥೆಯ ಮಾಲಕರಾಗಿದ್ದ ಸಲೀಂ ಖಾನ್, ಶೇಖ್ ಹಸೀನಾ ಅವರ ಬೆಂಬಲಿಗರಾಗಿದ್ದರು ಎನ್ನಲಾಗಿದೆ. ಶೇಖ್ ಹಸೀನಾ ದೇಶದಿಂದ ಪರಾರಿಯಾದ ನಂತರ ನಡೆಯುತ್ತಿರುವ ಹಿಂಸಾಚಾರಕ್ಕೆ ಸಲೀಂ ಖಾನ್ ಬಲಿಯಾಗಿದ್ದಾರೆ.
‘ತುಂಗಿ ರಾರ್ ಮಿಯಾ ಭಾಯ್’, ‘ಕಮಾಂಡೊ’ ಹಾಗೂ ಇನ್ನಿತರ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಸಲೀಂ ಖಾನ್ ಅವರ ನಿರ್ಮಾಣ ಸಂಸ್ಥೆಯು ನಿರ್ಮಿಸಿತ್ತು.
ಸಲೀಂ ಖಾನ್ ಅವರ ಪುತ್ರ ಶಂತೊ ಖಾನ್ ಕೂಡಾ ಸೋಮವಾರ ನಡೆದ ದಾಳಿಯಲ್ಲಿ ಹತ್ಯೆಗೀಡಾಗಿದ್ದು, ಅವರೊಬ್ಬ ಉದಯೋನ್ಮುಖ ನಟರಾಗಿದ್ದರು. ಅವರು 2019ರಲ್ಲಿ ಬಿಡುಗಡೆಗೊಂಡಿದ್ದ ‘ಪ್ರೇಮ್ ಚೋರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ನಂತರ, 2021ರಲ್ಲಿ ‘ಪಿಯಾ ರೆ’, 2023ರಲ್ಲಿ ‘ಬಾಬುಜಾನ್’ ಹಾಗೂ 2024ರಲ್ಲಿ ‘ಆ್ಯಂಟೊ ನಗರ್’ ಚಿತ್ರಗಳಲ್ಲೂ ಅವರು ನಟಿಸಿದ್ದರು.
ಬಾಂಗ್ಲಾದೇಶದ ಹಲವಾರು ಸಿನಿಮಾ ನಿರ್ಮಾಣಗಳಲ್ಲಿ ಭಾಗಿಯಾಗಿದ್ದ ನಟ-ನಿರ್ದೇಶಕ ಪರಂಬ್ರತ ಚಟರ್ಜಿ ಈ ಹತ್ಯೆಗಳ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಇವರೊಂದಿಗೆ ಬಂಗಾಳಿ ಚಿತ್ರರಂಗದ ಹಲವರು ಶಾಂತೊ ಖಾನ್ ಹಾಗೂ ಅವರ ತಂದೆ ಸಲೀಂ ಖಾನ್ ಅವರ ಹತ್ಯೆಯನ್ನು ಖಂಡಿಸಿದ್ದಾರೆ.