63 ಮಂದಿ ಇಸ್ಕಾನ್ ಧರ್ಮಗುರುಗಳು ಭಾರತಕ್ಕೆ ಪ್ರಯಾಣಿಸದಂತೆ ತಡೆದ ಬಾಂಗ್ಲಾ
ಕೊಲ್ಕತ್ತಾ: ಅಧಿಕೃತ ಪ್ರವಾಸ ದಾಖಲೆಗಳನ್ನು ಹೊಂದಿರುವ 63 ಮಂದಿ ಬಾಂಗ್ಲಾದೇಶಿ ಇಸ್ಕಾನ್ ಧರ್ಮಗುರುಗಳು ಗಡಿ ದಾಟಿ ಭಾರತಕ್ಕೆ ಪ್ರಯಾಣ ಬೆಳೆಸಲು ಶನಿವಾರ ರಾತ್ರಿ ಮತ್ತು ರವಿವಾರ ನಡೆಸಿದ ಪ್ರಯತ್ನವನ್ನು ತಡೆಯಲಾಗಿದೆ ಎಂದು ಹಲವು ಬಾಂಗ್ಲಾದೇಶಿ ಮಾಧ್ಯಮಗಳು ಮತ್ತು ಇಸ್ಕಾನ್ ಕೊಲ್ಕತ್ತಾ ವರದಿ ಮಾಡಿವೆ.
ಅಂತಾರಾಷ್ಟ್ರೀಯ ಗಡಿಯ ಬಾಂಗ್ಲಾದೇಶದ ಬದಿಯಲ್ಲಿ ಇರುವ ಬೆನಾಪೋಲ್ ಬಂದರಿನಲ್ಲಿ "ಸಂಶಯಾತ್ಮಕ ಚಟುವಟಿಕೆಗಳ" ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಅಧಿಕಾರಿಗಳು ತಡೆದಿದ್ದಾರೆ ಎಂದು ವರದಿಗಳು ವಿವರಿಸಿವೆ.
ರವಿವಾರ ತಡರಾತ್ರಿ ವರೆಗೆ, ಕೊಲ್ಕತ್ತಾದಲ್ಲಿರುವ ಬಾಂಗ್ಲಾದೇಶ ಡೆಪ್ಯುಟಿ ಹೈಕಮಿಷನ್ನ ಹಿರಿಯ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಬಾಂಗ್ಲಾದೇಶದಲ್ಲಿ ಇಸ್ಕಾನ್ ವಿರುದ್ಧ ತನಿಖೆ ನಡೆಸುವುದನ್ನು ವಿರೋಧಿಸಿ ನಡೆಯುತ್ತಿರುವ ಜಾಗತಿಕ ಪ್ರತಿಭಟನೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.
ನೆರೆಯ ದೇಶದ ವಿವಿಧ ಜಿಲ್ಲೆಗಳಿಗೆ ಸೇರಿದ 63 ಮಂದಿ ಧರ್ಮಗುರುಗಳು ಶನಿವಾರ ಸಂಜೆ ಹಾಗೂ ಭಾನುವಾರ ಬೆಳಿಗ್ಗೆ ಬೆನಾಪೋಲ್ ಗಡಿಗೆ ಆಗಮಿಸಿ, ಭಾರತಕ್ಕೆ ತೆರಳಲು ಬಯಸಿದರು. ಆದರೆ ಸಂಶಯಾತ್ಮಕ ಪ್ರಯಾಣದ ಕಾರಣಕ್ಕೆ ಇಮಿಗ್ರೇಶನ್ ಪೊಲೀಸರು ಅವರನ್ನು ತಡೆಹಿಡಿದಿದ್ದಾರೆ ಎಂದು ವರದಿಗಳು ಹೇಳಿವೆ.
ಇಸ್ಕಾನ್ ಸದಸ್ಯ ಸೌರಭ್ ತಪೇಂದರ್ ಚೆಲಿ ಈ ಬಗ್ಗೆ ಹತಾಶೆ ವ್ಯಕ್ತಪಡಿಸಿ, "ಭಾರತದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಭಾಗವಹಿಸಲು ಬಂದಿದ್ದೆ. ಆದರೆ ಇಮಿಗ್ರೇಶನ್ ಅಧಿಕಾರಿಗಳು ಯಾವುದೇ ಕಾರಣ ನೀಡದೇ ವಾಪಸ್ಸು ಕಳುಹಿಸಿದ್ದಾರೆ" ಎಂದು ವಿವರಿಸಿದ್ದಾರೆ. ಮತ್ತೊಬ್ಬ ಭಕ್ತರು ಕೂಡಾ ಇದೇ ಭಾವನೆಯನ್ನು ವ್ಯಕ್ತಪಡಿಸಿ, ಸ್ಪಷ್ಟ ಕಾರಣ ನೀಡದೇ ಅಧಿಕಾರಿಗಳು ವಾಪಾಸ್ಸು ಕಳುಹಿಸಿದ್ದಾಗಿ ಆಪಾದಿಸಿದ್ದಾರೆ.