ಬಾಂಗ್ಲಾದೇಶ: ಶೇಖ್ ಹಸೀನಾ ಸಲಹೆಗಾರ, ಮಾಜಿ ಕಾನೂನು ಸಚಿವ ಬಂಧನ

Update: 2024-08-14 02:21 GMT

PC: x.com/iamforsan

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಕೈಗಾರಿಕೆ ಮತ್ತು ಹೂಡಿಕೆ ಸಲಹೆಗಾರ, ಖ್ಯಾತ ಉದ್ಯಮಿ ಸಲ್ಮಾನ್ ಫಝ್ಲರ್ರಹಮಾನ್ ಹಾಗೂ ಮಾಜಿ ಕಾನೂನು ಸಚಿವ ಅನೀಸುಲ್ ಹಖ್ ಅವರನ್ನು ಮಂಗಳವಾರ ಸಂಜೆ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ದೇಶದಲ್ಲಿ ವ್ಯಾಪಕವಾಗಿ ನಡೆದ ವಿದ್ಯಾರ್ಥಿ ಪ್ರತಿಭಟನೆ, ಹಸೀನಾ ಪದಚ್ಯುತಿ ಮತ್ತು ಹಂಗಾಮಿ ಸರ್ಕಾರದ ರಚನೆ ಬಳಿಕ ಅವಾಮಿ ಲೀಗ್ ನ ಉನ್ನತ ನಾಯಕರ ಮೇಲೆ ನಡೆದ ಪ್ರಥಮ ದಾಳಿ ಇದಾಗಿದೆ.

ಈ ಬಂಧನವನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಆಯುಕ್ತ ಮೈನುಲ್ ಹಸನ್ ದೃಢಪಡಿಸಿದ್ದಾರೆ. ಜುಲೈ 16ರಂದು ಢಾಕಾ ಕಾಲೇಜಿನ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರ ಜತೆ ನಡೆಸಿದ ಸಂಘರ್ಷದಲ್ಲಿ ವಿದ್ಯಾರ್ಥಿ ಹಾಗೂ ಬೀದಿಬದಿ ವ್ಯಾಪಾರಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ರಹಮಾನ್ ಸಂಸತ್ತಿನಲ್ಲಿ ಢಾಕಾ-1 ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಢಾಕಾದ ಸದರ್ ಘಾಟ್ ನಿಂದ ದೋಣಿಯ ಮೂಲಕ ದೇಶ ತೊರೆಯುವ ಪ್ರಯತ್ನದಲ್ಲಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಬಂಧನಕ್ಕೆ ಮುನ್ನ ದೇಶದಿಂದ ಪಲಾಯನ ಮಾಡಲು ಇಬ್ಬರು ಮುಖಂಡರು ಯತ್ನಿಸಿದ್ದರು ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿತ್ತು.

ರಹಮಾನ್ ಕುಟುಂಬದ ಸಂಕಷ್ಟ ಈ ಬಂಧನಕ್ಕಷ್ಟೇ ಸೀಮಿತವಾಗಿಲ್ಲ. ಸಾಲ ಬಾಕಿ ಪ್ರಕರಣವೊಂದರ ಸಂಬಂಧ ಅವರ ಪುತ್ರ ಅಹ್ಮದ್ ಶಯಾನ್ ಎಫ್. ರಹಮಾನ್ ಅವರನ್ನು ಇತೀಚೆಗೆ ಐಎಫ್ಐಸಿ ಬ್ಯಾಂಕ್ ನಿರ್ದೇಶಕ ಹುದ್ದೆಯಿಂದ ವಜಾ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News