ಬಾಂಗ್ಲಾದೇಶ: ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಖಂಡಿಸಿ ಪ್ರತಿಭಟನೆ
ಢಾಕಾ: ಅಲ್ಪಸಂಖ್ಯಾತರಿಗೆ ಸೇರಿದ ಮನೆಗಳು, ಮಳಿಗೆಗಳು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ದಾಳಿಗಳನ್ನು ಖಂಡಿಸಿ ಹಿಂದೂ ಸಮುದಾಯದೊಂದಿಗೆ ಮುಸ್ಲಿಮರೂ ಬಾಂಗ್ಲಾದೇಶದ ಬೀದಿಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ. ಆಗಸ್ಟ್ 5ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ತಮ್ಮ ಹುದ್ದೆಯಿಂದ ನಿರ್ಗಮಿಸಿದ ನಂತರ ಈ ಘಟನೆಗಳು ಪ್ರಾರಂಭಗೊಂಡಿವೆ ಎಂದು ವರದಿಯಾಗಿದೆ.
ಶೇಖ್ ಹಸೀನಾ ನೇತೃತ್ವದ ಸರಕಾರ ಪತನಗೊಂಡ ನಂತರ ಬಾಂಗ್ಲಾದೇಶದ 52 ಜಿಲ್ಲೆಗಳಲ್ಲಿ 205 ದಾಳಿಗಳು ನಡೆದಿವೆ ಎಂದು ವರದಿಯಾಗಿದ್ದು, ಈ ದಾಳಿಗಳಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ಹಿಂಸಾಚಾರವನ್ನು ವಿರೋಧಿಸಿ ಢಾಕಾ ಹಾಗೂ ಚಿತ್ತಗಾಂಗ್ ನಂತಹ ಪ್ರಮುಖ ನಗರಗಳಲ್ಲಿ ಲಕ್ಷಾಂತರ ಹಿಂದೂಗಳು ನ್ಯಾಯ ಹಾಗೂ ರಕ್ಷಣೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗುವವರನ್ನು ಶಿಕ್ಷಿಸಲು ತ್ವರಿತ ವಿಚಾರಣೆ ನಡೆಸಲು ವಿಶೇಷ ನ್ಯಾಯಾಧಿಕರಣಗಳನ್ನು ಸ್ಥಾಪಿಸಬೇಕು, ಸಂಸತ್ ಸ್ಥಾನಗಳ ಪೈಕಿ ಶೇ. 10ರಷ್ಟನ್ನು ಅಲ್ಪಸಂಖ್ಯಾತರಿಗೆ ಮೀಸಲಿಡಬೇಕು ಹಾಗೂ ಅಲ್ಪಸಂಖ್ಯಾತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಢಾಕಾದಲ್ಲಿ ನಡೆದ ಈ ಪ್ರತಿಭಟನೆಯು ಶಾಬಾಗ್ ಕೂಡು ಸ್ಥಳವನ್ನು ತಲುಪಿದಾಗ, ಮೂರು ಗಂಟೆಗೆ ಹೆಚ್ಚು ಕಾಲ ಸಂಚಾರ ವ್ಯತ್ಯಯಗೊಂಡಿತು ಎಂದು ವರದಿಯಾಗಿದೆ.
ಈ ನಡುವೆ, ಬಾಂಗ್ಲಾದೇಶದ ಮಧ್ಯಂತರ ಪ್ರಧಾನಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರು ಅಲ್ಪಸಂಖ್ಯಾತರ ಮೇಲೆ ನಡೆಸಲಾಗುತ್ತಿರುವ ದಾಳಿಗಳನ್ನು ಖಂಡಿಸಿದ್ದು, ಇದು ಹೀನ ಕೃತ್ಯ ಎಂದು ಬಣ್ಣಿಸಿದ್ದಾರೆ. ಹಿಂದೂ, ಕ್ರಿಶ್ಚಿಯನ್, ಬುದ್ಧ ಧರ್ಮದ ಕುಟುಂಬಗಳ ಸುರಕ್ಷತೆಯನ್ನು ಖಾತರಿಪಡಿಸುವಂತೆ ಅವರು ಪ್ರತಿಭಟನೆಯನ್ನು ಮುನ್ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ರಾಷ್ಟ್ರದ ಐಕ್ಯತೆಯ ಮಹತ್ವವನ್ನು ಒತ್ತಿ ಹೇಳಿರುವ ಯೂನಸ್, “ಅವರಿಗೆ ಯಾರೂ ಹಾನಿ ಮಾಡಲು ಸಾಧ್ಯವಿಲ್ಲ. ಅವರು ನಮ್ಮ ಸಹೋದರರು. ನಾವು ಒಟ್ಟಿಗೆ ಹೋರಾಡಿದ್ದೇವೆ ಹಾಗೂ ನಾವು ಒಟ್ಟಾಗಿಯೇ ಇರಲಿದ್ದೇವೆ ಎಂದು ನೀವು ಹೇಳಬೇಕು” ಎಂದು ಕಿವಿಮಾತು ಹೇಳಿದ್ದಾರೆ.