ತವರಿಗೆ ತೆರಳಲು ಬಾಂಗ್ಲಾದೇಶೀಯರ ಧಾವಂತ: ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಸರದಿ ಸಾಲು
ಪೆಟ್ರಾಪೋಲ್: ನಾರ್ಥ್ 24 ಪರಗಣಾ ಜಿಲ್ಲೆಯ ವ್ಯಾಪ್ತಿಯಲ್ಲಿನ ಗಡಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ 45 ವರ್ಷ ವಯಸ್ಸಿನ ಶಾಲಾ ಶಿಕ್ಷಕಿ ಸುಧಾರಾಣಿ ಮಂಡಲ್ ಬಾಂಗ್ಲಾದೇಶಕ್ಕೆ ರವಿವಾರ ತುರಾತುರಿಯಲ್ಲಿ ವಾಪಸ್ಸಾದರು.
"ಮನೆ, ಮಳಿಗೆ ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಹಿಂದೂಗಳ ಮೇಲೆ ಕ್ರೂರ ದಾಳಿ ನಡೆಯುತ್ತಿದೆ ಹಾಗೂ ಹಲವು ಮಂದಿ ಗಾಯಗೊಂಡಿದ್ದಾರೆ. ನನಗೆ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಭಾರತ- ಬಾಂಗ್ಲಾ ಗಡಿ ಮುಚ್ಚುವ ಮೊದಲು ನಾನು ಪತಿ, ಮಕ್ಕಳು ಹಾಗೂ ಭಾವಂದಿರ ಸಹಿತ ಕುಟುಂಬದೊಂದಿಗೆ ಸೇರಿಕೊಳ್ಳಲು ತೆರಳುತ್ತಿದ್ದೇನೆ" ಎಂದು ಸುಧಾರಾಣಿ ಹೇಳಿದರು.
ಸುಧಾರಾಣಿ, ಬಾಂಗ್ಲಾದೇಶದ ಫರೀದ್ ಪುರದ ನಿವಾಸಿಯಾಗಿದ್ದು, ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರಾಸಟ್ ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ನವೆಂಬರ್ 22ರಂದು ಅಂದರೆ ಇಸ್ಕಾನ್ ಧರ್ಮಗುರು ಚಿನ್ಮಯ ಕೃಷ್ಣದಾಸ್ ಅವರನ್ನು ಬಾಂಗ್ಲಾದಲ್ಲಿ ಬಂಧಿಸುವ ಮೂರು ದಿನ ಮೊದಲು ಆಗಮಿಸಿದ್ದರು.
ಕಳೆದ ಕೆಲ ದಿನಗಳಿಂದ ರಾಜಕೀಯ ವಿಪ್ಲವ ನಡೆಯುತ್ತಿರುವ ನೆರೆದೇಶದಲ್ಲಿ ಭಾರತದ ಜತೆಗಿನ ಗಡಿ ಮುಚ್ಚಲಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಢಾಕಾ, ಕಾಕ್ಸ್ ಬಜಾರ್, ಮೀರಪುರ, ರಂಗಪುರ, ಕುಸ್ಟಿಯಾ, ಕರೀಂಗಂಜ್ ಮತ್ತು ಚಿತ್ತಗಾಂಗ್ ಸೇರಿದಂತೆ ಹಲವು ಕಡೆಗಳ ಪ್ರವಾಸಿಗರು ಮತ್ತು ವ್ಯಾಪಾರಿಗಳು ಭಾರತ- ಬಾಂಗ್ಲಾ ಅಂತರರಾಷ್ಟ್ರೀಯ ಪೆಟ್ರಾಪೋಲ್ ಗಡಿಯಲ್ಲಿ ಜಮಾಯಿಸಿದ್ದಾರೆ.
ಆದರೆ ಗಡಿ ಮುಚ್ಚಲಾಗುತ್ತದೆ ಎಂಬ ವದಂತಿಗಳು ನಿರಾಧಾರ ಎಂದು ಬಿಎಸ್ಎಫ್ ವಕ್ತಾರರು ಹೇಳಿದ್ದಾರೆ. ಅಧಿಕೃತ ಪ್ರವಾಸಿ ದಾಖಲೆಗಳನ್ನು ಹೊಂದಿರುವ ಯಾರು ಬೇಕಾದರೂ ತೆರಳಲು ಗಡಿ ಮುಕ್ತವಾಗಿದೆ. ಆದರೆ ಅಕ್ರಮ ಗಡಿನುಸುಳುವಿಕೆಯನ್ನು ತಡೆಯಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.