ಸಿರಿಯಾದಲ್ಲಿ 24 ವರ್ಷಗಳ ಬಶರ್ ಅಸ್ಸಾದ್ ಅಳ್ವಿಕೆ ಅಂತ್ಯ

Update: 2024-12-08 16:44 GMT

PC : PTI

ಬೈರೂತ್: ಸಿರಿಯಾ ಬಂಡುಕೋರರು ರವಿವಾರ ರಾಜಧಾನಿ ಡಮಾಸ್ಕಸ್ ಮೇಲೆ ಮಿಂಚಿನ ದಾಳಿ ನಡೆಸಿದ್ದು ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸರಕಾರವನ್ನು ಪತನಗೊಳಿಸಿದ್ದಾರೆ. ಅಸ್ಸಾದ್ ಅವರು ದೇಶವನ್ನು ತೊರೆದಿದ್ದು, ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಸಿರಿಯಾದ ಸುದ್ದಿಮಾಧ್ಯಮಗಳು ತಿಳಿಸಿವೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಳ್ವಿಕೆ ಅಂತ್ಯಗೊಂಡಿದೆ.

ಎರಡೇ ವಾರದಲ್ಲಿ ಇದ್ಲಿಬ್, ಹೋಮ್ಸ್, ಅಲೆಪ್ಪೊ ಸೇರಿದಂತೆ ಸಿರಿಯಾದ ವಿವಿಧ ನಗರಗಳನ್ನು ಮಿಂಚಿನ ವೇಗದಲ್ಲಿ ವಶಪಡಿಸಿಕೊಂಡಿದ್ದ ಬಂಡುಕೋರರು ರಾಜಧಾನಿ ಡಮಾಸ್ಕಸ್‌ಗೆ ರವಿವಾರ ಲಗ್ಗೆ ಹಾಕಿದ್ದರು. ಇದಕ್ಕೆ ಕೆಲವೇ ತಾಸುಗಳ ಮೊದಲು ಅಸ್ಸಾದ್ ಅವರು ದೇಶವನ್ನು ತೊರೆದಿದ್ದಾರೆ. ಬಂಡುಕೋರ ಸಂಘಟನೆ ಹಯಾತ್ ತಾಹ್ರಿರ್ ಅಲ್-ಶಾಮ್ (ಎಚ್‌ಟಿಎಸ್) ನೇತೃತ್ವದಲ್ಲಿ ಪ್ರತಿಪಕ್ಷಗಳ ಒಕ್ಕೂಟವು ಎರಡು ವಾರಗಳ ಹಿಂದೆ ಅಸ್ಸಾದ್ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಆರಂಭಿಸಿತ್ತು.

ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರನ್ನು ಪದಚ್ಯುತಗೊಳಿಸಲಾಗಿದ್ದು, ಜೈಲುಗಳಲ್ಲಿರುವ ಎಲ್ಲಾ ಬಂಧಿತರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಂಡುಕೋರರ ಗುಂಪೊಂದು ಹೇಳಿಕೆ ನೀಡಿರುವ ವೀಡಿಯೊವನ್ನು ಸಿರಿಯಾ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪ್ರಸಾರ ಮಾಡಿದೆ. ಸ್ವತಂತ್ರ ಸಿರಿಯದ ಎಲ್ಲಾ ಆಡಳಿತ ಸಂಸ್ಥೆಗಳನ್ನು ಸಂರಕ್ಷಿಸುವಂತೆ ಕರೆ ನೀಡಿದೆ.

ಬಂಡುಕೋರರು ಎಲ್ಲಾ ಕಡೆಗಳಿಂದಲೂ ಡಮಾಸ್ಕಸ್ ನಗರವನ್ನು ಸುತ್ತುವರಿದಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಸೇನಾ ಪ್ರಧಾನ ಕಚೇರಿಯನ್ನು ಕೂಡಾ ಅವರು ಸ್ವಾಧೀನಪಡಿಸಿಕೊಂಡಿದ್ದಾರೆ. ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಅರಮನೆಗೆ ನುಗ್ಗಿರುವ ಜನರು ಅಲ್ಲಿನ ಪೀಠೋಪಕರಣಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳನ್ನು ಟಿವಿಜಾಲಗಳು ಪ್ರಸಾರ ಮಾಡಿವೆ.

ಡಮಾಸ್ಕಸ್ ನಗರ ಸ್ವತಂತ್ರಗೊಂಡಿರುವುದಾಗಿ ಬಂಡುಕೋ ಗುಂಪುಗಳು ಘೋಷಿಸುತ್ತಿದ್ದಂತೆಯೇ, ರಾಜಧಾನಿಯ ಬೀದಿಗಳಲ್ಲಿ ನಾಗರಿಕರು ಸಂಭ್ರಮಾಚರಣೆಯಲ್ಲಿ ನಿರತರಾಗಿರುವ ದೃಶ್ಯಗಳು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಉಚ್ಛಾಟಿತ ಅಧ್ಯಕ್ಷ ಅಸ್ಸಾದ್ ಅವರ ತಂದೆ ಹಾಫೇಝ್ ಅವರ ಪ್ರತಿಮೆಯನ್ನು ನಾಗರಿಕರು ಒಡೆದುಹಾಕಿದ್ದಾರೆ. ಅಸ್ಸಾದ್ ಅವರ ಭಿತ್ತಿಚಿತ್ರಗಳನ್ನು ವಿರೂಪಗೊಳಿಸಿದ್ದಾರೆ. ಬಂಡುಕೋರರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ, ವಿಜಯದ ಸಂಕೇತವನ್ನು ಪ್ರದರ್ಶಿಸುತ್ತಾ ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂತು.

‘‘ ಅಸ್ಸಾದ್ ಕುಟುಂಬದ ನೇತೃತ್ವದ 50 ವರ್ಷಗಳ ಬಾಥ್ ಸರಕಾರದ ಆಳ್ವಿಕೆಯಡಿ ಅಪರಾಧಗಳು ಹಾಗೂ ನಿರಂಕುಶಾಧಿಕಾರ ಹಾಗೂ ಬಲವಂತದ ಸ್ಥಳಾಂತರಗಳ ಬಳಿಕ ಇಂದು ಅಂಧಕಾರದ ಯುಗ ಕೊನೆಗೊಂಡಿದೆ ಹಾಗೂ ಸಿರಿಯಾದಲ್ಲಿ ಹೊಸ ಶಕೆ ಆರಂಭಗೊಂಡಿದೆ’’ ಎಂದು ಬಂಡುಕೋರ ಸಂಘಟನೆಗಳು ಸಾಮಾಜಿಕ ಜಾಲತಾಣ ಟೆಲಿಗ್ರಾಂನಲ್ಲಿ ಪ್ರಸಾರ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬಂಡುಕೋರರು ಡಮಾಸ್ಕಸ್ ಮೇಲೆ ಆಕ್ರಮಣ ನಡೆಸುವ ಮುನ್ನ ನಗರದ ಹೊರವಲಯದಲ್ಲಿರುವ ಸೆಡನಯಾ ಜೈಲಿನಿಂದ ಕೈದಿಗಳನ್ನು ಬಿಡುಗಡೆಗೊಳಿಸಿದ್ದಾರೆ. ಸಿರಿಯಾ ಆಡಳಿತ ವಿರೋಧಿಗಳನ್ನು ಈ ಕಾರಾಗೃಹದಲ್ಲಿ ಬಂಧಿಸಿ , ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಬಂಡುಕೋರರ ಜೊತೆ ಸಹಕರಿಸಲು ಸಿದ್ಧ: ಪ್ರಧಾನಿ ಜಲಾಲಿ

ಈ ಮಧ್ಯೆ ಪ್ರಧಾನಿ ಮೊಹಮ್ಮದ್ ಘಾಝಿ ಅಲ್-ಜಲಾಲಿ ಅವರು ಹೇಳಿಕೆ ನೀಡಿ, ಸಿರಿಯಾ ಜನತೆ ಆಯ್ಕೆ ಮಾಡುವ ಯಾವುದೇ ನಾಯಕತ್ವದ ಸಹಕರಿಸಲು ಸಿದ್ಧನಿರುವುದಾಗಿ ತಿಳಿಸಿದ್ದಾರೆ. ‘‘ ನಾನು ನನ್ನ ಮನೆಯಲ್ಲೇ ಇದ್ದೇನೆ. ಎಲ್ಲಿಗೂ ಹೋಗಿಲ್ಲ. ಯಾಕೆಂದರೆ ನಾನು ಈ ದೇಶಕ್ಕೆ ಸೇರಿದವನಾಗಿದ್ದೇನೆ’’ ಎಂದು ಜಲಾಲಿ ಅವರು ವೀಡಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ತನ್ನ ಕೆಲಸವನ್ನು ಮುಂದುವರಿಸಲು ಇಂದು ತಾನು ಕಚೇರಿಗೆ ತೆರಳಲಿದ್ದೇನೆ ಎಂದರು. ಸಾರ್ವಜನಿಕ ಸೊತ್ತುಗಳನ್ನು ಹಾನಿಗೊಳಿಸದಂತೆ ಅವರು ಸಿರಿಯಾದ ನಾಗರಿಕರಿಗೆ ಮನವಿ ಮಾಡಿದರು.

ಬಶರ್ ಅಸ್ಸಾದ್ ಹಾಗೂ ಅವರ ರಕ್ಷಣಾ ಸಚಿವರು ಎಲ್ಲಿದ್ದಾರೆಂಬ ಬಗ್ಗೆ ತನಗೆ ತಿಳಿದಿಲ್ಲ. ಶನಿವಾರ ರಾತ್ರಿಯಿಂದ ಅವರು ತನ್ನೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದ್ದಾರೆಂದು ಎಂದು ಜಲಾಲಿ ಅವರು ಸೌದಿ ಆರೇಬಿಯದ ಸುದ್ದಿವಾಹಿನಿ ಅಲ್-ಅರಬಿಯಾಕ್ಕೆ ತಿಳಿಸಿದ್ದಾರೆ.

ಸಿರಿಯದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸಬೇಕೆಂದು ಅವರು ಕರೆ ನೀಡಿದ್ದಾರೆ. ಈ ಮಧ್ಯೆ ಸಿರಿಯದಲ್ಲಿನ ನಡೆಯುತ್ತಿರುವ ಅಸಾಮಾನ್ಯ ಬೆಳವಣಿಗೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿಕಟವಾದ ನಿಗಾವಿರಿಸಿದ್ದಾರೆಂದು ಶ್ವೇತಭವನವು ತಿಳಿಸಿದೆ.

ಸಾವಿರಾರು ಸಿರಿಯ ಸೈನಿಕರು ಬಾಗ್ದಾದ್‌ಗೆ ಪಲಾಯನ:

ಡಮಾಸ್ಕಸ್ ಬಂಡುಕೋರರ ಕೈವಶವಾಗುತ್ತಿದ್ದಂತೆಯೇ, ಸಿರಿಯದ ಸಾವಿರಾರು ಸೈನಿಕರು, ಯುದ್ಧವನ್ನು ತೊರೆದು ಇರಾಕ್ ಗಡಿ ದಾಟಿದ್ದಾರೆ. ನೂರಾರು ಸೈನಿಕರು ಬಂಡುಕಕೋರರಿಗೆ ಶರಣಾಗಿದ್ದಾರೆ. ಸಿರಿಯನ್ ಸೈನಿಕರು ಅಲ್-ಖ್ವಾಮ್ ಗಡಿದಾಟು ಮೂಲಕ ಇರಾಕ್ ಪ್ರವೇಶಿಸಲು, ಬಾಗ್ದಾದ್ ಆಡಳಿತವು ಅನುಮತಿ ನೀಡಿದೆ. ಸುಮಾರು 2 ಸಾವಿರಕ್ಕೂ ಅಧಿಕ ಸೈನಿಕರು ಇರಾಕ್‌ಗೆ ಪರಾರಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.

1971ರಲ್ಲಿಅಧಿಕಾರಕ್ಕೇರಿದ ಹಾಫೇಝ್ ಅಲ್ ಅಸ್ಸಾದ್ ಅವರು ನಿರಂಕುಶ ಆಡಳಿತ ನಡೆಸಿದ್ದು, 2000ನೇ ಇಸವಿಯಲ್ಲಿ ಕೊನೆಯುಸಿರೆಳೆದಿದ್ದರು. ಆನಂತರ ಅವರ ಪುತ್ರ ಬಶರ್ ಅಲ್-ಅಸ್ಸಾದ್ ಅವರು ಅಧಿಕಾರವಹಿಸಿಕೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News