ಹಮಾಸ್‌ ಜೊತೆ ಯುದ್ಧ ಅಂತ್ಯಗೊಳಿಸಲು ಇಸ್ರೇಲ್‌ ಪ್ರಸ್ತಾಪಿಸಿದ ಮೂರು ಹಂತದ ಒಪ್ಪಂದದ ಕುರಿತು ಬೈಡನ್‌ ಘೋಷಣೆ

Update: 2024-06-01 09:56 GMT

 ಜೋ ಬೈಡನ್‌ | PTI 

ವಾಷಿಂಗ್ಟನ್: ಹಮಾಸ್‌ ಮುಂದೆ ಮೂರು ಹಂತದ ಕದನವಿರಾಮ ಒಪ್ಪಂದದ ಪ್ರಸ್ತಾವನೆಯನ್ನು ಇಸ್ರೇಲ್‌ ಮುಂದಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇಂದು ಹೇಳಿದ್ದಾರೆಂದು ಅಸೋಸಿಯೇಟೆಡ್‌ ಪ್ರೆಸ್‌ ವರದಿ ಮಾಡಿದೆ.

ಈ ಪ್ರಸ್ತಾವನೆಯಂತೆ ಮೊದಲ ಹಂತದಲ್ಲಿ ಆರು ವಾರಗಳ ಕಾಲ ಸಂಪೂರ್ಣ ಕದನ ವಿರಾಮವಿರಲಿದೆ ಹಾಗೂ ಗಾಝಾದ ಜನವಸತಿ ಪ್ರದೇಶಗಳಿಂದ ಇಸ್ರೇಲಿ ಪಡೆಗಳ ವಾಪಸಾತಿಯನ್ನು ಒಳಗೊಂಡಿದೆ ಎಂದು ಬೈಡನ್‌ ಹೇಳಿದ್ದಾರೆ. ಈ ಹಂತದಲ್ಲಿ ಗಾಝಾಗೆ ಮಾನವೀಯ ಸಹಾಯ ಕೂಡ ಹರಿದು ಬರಲಿದೆ ಹಾಗೂ ಪ್ರತಿ ದಿನ ಮಾನವೀಯ ಸಹಾಯದ 600 ಟ್ರಕ್‌ಗಳಿಗೆ ಅನುಮತಿಸಲಾಗುವುದು. ಈ ಹಂತದಲ್ಲಿ ಮಹಿಳೆಯರು, ವೃದ್ಧರು ಮತ್ತು ಗಾಯಾಳುಗಳು ಸೇರಿದಂತೆ ಒತ್ತೆಯಾಳುಗಳನ್ನು ನೂರಾರು ಫೆಲೆಸ್ತೀನಿ ಕೈದಿಗಳ ಬಿಡುಗಡೆಗೆ ಬದಲಾಗಿ ಬಿಡುಗಡೆಗೊಳಿಸಲಾಗುವುದು. ಈ ಹಂತದಲ್ಲಿ ಅಮೆರಿಕನ್‌ ಒತ್ತೆಯಾಳುಗಳನ್ನೂ ಬಿಡುಗಡೆಗೊಳಿಸಲಾಗುವುದು ಎಂದು ಬೈಡನ್‌ ಹೇಳಿದ್ದಾರೆ.

ಎರಡನೇ ಹಂತದಲ್ಲಿ ಪುರುಷ ಸೈನಿಕರು ಸೇರಿದಂತೆ ಉಳಿದ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲಾಗುವುದು ಹಾಗೂ ಗಾಝಾದಿಂದ ಇಸ್ರೇಲಿ ಪಡೆಗಳ ವಾಪಸಾತಿಯೂ ಈ ಹಂತದಲ್ಲಿ ಸೇರಲಿದೆ.

ಈ ಹಂತದಲ್ಲಿ ಇಸ್ರೇಲ್‌ ಮತ್ತು ಹಮಾಸ್‌ ಸಂಘರ್ಷಕ್ಕೆ ಖಾಯಂ ಅಂತ್ಯದ ಕುರಿತಂತೆ ಸಂಧಾನ ನಡೆಸಲಾಗುವುದು. ಹಮಾಸ್‌ ತನ್ನ ಮಾತುಗಳನ್ನು ಉಳಿಸಿಕೊಂಡಲ್ಲಿ ತಾತ್ಕಾಲಿಕ ಕದನ ವಿರಾಮವು, ಇಸ್ರೇಲಿ ಪ್ರಸ್ತಾವನೆಯಲ್ಲಿರುವಂತೆ ಸಂಘರ್ಷದ ಖಾಯಂ ಸ್ಥಗಿತಕ್ಕೆ ಕಾರಣವಾಗಲಿದೆ ಎಂದು ಬೈಡನ್‌ ಹೇಳಿದ್ದಾರೆ.

ಮೂರನೇ ಹಂತವು ಗಾಝಾ ಮರುನಿರ್ಮಾಣದತ್ತ ಒತ್ತು ನೀಡಲಿದೆ ಎಂದು ಬೈಡನ್‌ ಹೇಳಿದ್ದಾರೆ.

ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆಗೆ ಸಂಧಾನ ನಡೆಸುವಂತೆ ತಮ್ಮ ದೇಶದ ತಂಡಕ್ಕೆ ಅಧಿಕಾರ ನೀಡಿರುವುದಾಗಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರ ಕಚೇರಿ ಹೇಳಿದೆಯಲ್ಲದೆ ಇಸ್ರೇಲ್‌ ಪ್ರಸ್ತಾಪಿಸಿರುವಂತೆಯೇ ಮಾರ್ಗಸೂಚಿಗಳನ್ನು ಅನುಸರಿಸಬೇಕಿದೆ, ಎಲ್ಲಾ ಒತ್ತೆಯಾಳುಗಳ ವಾಪಸಾತಿ ಮತ್ತು ಹಮಾಸ್‌ನ ಮಿಲಿಟರಿ ಸಾಮರ್ಥ್ಯಗಳ ನಿರ್ಮೂಲನೆ ತನಕ ಯುದ್ಧ ನಿಲ್ಲದು ಎಂದು ಇಸ್ರೇಲ್‌ ಹೇಳಿದೆ.

ಕದನವಿರಾಮ ಪ್ರಸ್ತಾವನೆಯನ್ನು ಹಮಾಸ್‌ ಸ್ವಾಗತಿಸಿದೆ ಹಾಗೂ ಇಸ್ರೇಲ್‌ ಅದಕ್ಕೆ ಬದ್ಧವಾಗಿರುವ ತನಕ ತಾನು ಕೂಡ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News