ಗಾಝಾಕ್ಕೆ ನೆರವು ಪೂರೈಕೆ ತಡೆಯುವುದು ಅಪರಾಧ ; ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಎಚ್ಚರಿಕೆ
ಕೈರೊ: ಮಾನವೀಯ ನೆರವು ಗಾಝಾ ಪ್ರವೇಶಿಸದಂತೆ ತಡೆಯುವುದು ಅಪರಾಧವಾಗಬಹುದು ಎಂದು ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಮುಖ್ಯ ಅಭಿಯೋಜಕ ಕರೀಂ ಖಾನ್ ಎಚ್ಚರಿಕೆ ನೀಡಿದ್ದಾರೆ.
ಈಜಿಪ್ಟ್ ನ ರಫಾ ಗಡಿದಾಟಿಗೆ ಭೇಟಿ ನೀಡಿದ ಬಳಿಕ ಕೈರೊದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ದೈನಂದಿನ ಅಗತ್ಯದ ವಸ್ತುಗಳನ್ನು ಸಾಗಿಸುವ ಟ್ರಕ್ ಗಳು ರಫಾ ಗಡಿದಾಟು(ಬೋರ್ಡರ್ ಕ್ರಾಸಿಂಗ್)ವಿನಲ್ಲಿ ಬಾಕಿಯಾಗಿವೆ. ಜಿನೆವಾ ಸಮಾವೇಶದಲ್ಲಿ ನಿರ್ಧರಿಸಿದಂತೆ ಪರಿಹಾರ ಸಾಮಾಗ್ರಿಗಳನ್ನು ತಡೆಯುವುದು ಐಸಿಸಿ ವ್ಯಾಪ್ತಿಯೊಳಗೆ ಅಪರಾಧ ಕೃತ್ಯವಾಗಬಹುದು’ ಎಂದರು.
‘ಮಾನವೀಯ ನೆರವನ್ನು ಹೊತ್ತು ತಂದ ಟ್ರಕ್ ಗಳು ಯಾರಿಗೂ ಅಗತ್ಯವಿರದ ಪ್ರದೇಶದಲ್ಲಿ, ಅಂದರೆ ಈಜಿಪ್ಟ್ ನ ರಫಾದಲ್ಲಿ ಸಿಕ್ಕಿಬಿದ್ದಿವೆ. ಈ ಸರಕುಗಳು ಇನ್ನಷ್ಟು ವಿಳಂಬವಿಲ್ಲದೆ ಗಾಝಾದ ನಾಗರಿಕರನ್ನು ತಲುಪಬೇಕಿದೆ. ಫೆಲೆಸ್ತೀನಿಯನ್ ಭೂಪ್ರದೇಶದಲ್ಲಿ ನಡೆದ ಅಥವಾ ಮಾಡಿದ ಯಾವುದೇ ಅಪರಾಧಗಳನ್ನು (ಇಸ್ರೇಲ್ ನಿಂದ ಆಗಲಿ ಅಥವಾ ಫೆಲೆಸ್ತೀನ್ ನಿಂದ ಆಗಲಿ) ಐಸಿಸಿ ತನಿಖೆ ನಡೆಸಲಿದೆ. ಇದರಲ್ಲಿ ಗಾಝಾದಲ್ಲಿ ಈಗ ನಡೆಯುತ್ತಿರುವ, ಪಶ್ಚಿಮ ದಂಡೆಯಲ್ಲಿ ನಡೆಯುತ್ತಿರುವ ಘಟನೆಗಳೂ ಸೇರಿವೆ’ ಎಂದು ಅವರು ಹೇಳಿದ್ದಾರೆ.
1967ರಿಂದ ಇಸ್ರೇಲ್ ಆಕ್ರಮಿಸಿಕೊಂಡಿರುವ ಭೂಪ್ರದೇಶದಲ್ಲಿ ಫೆಲೆಸ್ತೀನ್ ನಾಗರಿಕರ ವಿರುದ್ಧ ವಸಾಹತುಗಾರರು ನಡೆಸಿದ ಆಕ್ರಮಣದ ಪ್ರಮಾಣ ಹೆಚ್ಚಳಗೊಂಡಿರುವುದು ಕಳವಳಕಾರಿಯಾಗಿದೆ. ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದೂ ಜಿನೆವಾ ಸಮಾವೇಶದ ಉಲ್ಲಂಘನೆಯಾಗಿದೆ. ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಮತ್ತು ಸುರಕ್ಷಿತ ವಾಪಸಾತಿ ಈಗಿನ ಅಗತ್ಯವಾಗಿದೆ . ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಗೆ ಕೆಲವು ಸ್ಪಷ್ಟ ಬದ್ಧತೆಗಳಿವೆ, ಕೇವಲ ನೈತಿಕ ಬದ್ಧತೆ ಮಾತ್ರವಲ್ಲ, ಕಾನೂನು ಬಾಧ್ಯತೆಗಳೂ ಇವೆ. ಈ ತತ್ವವು ಇಸ್ರೇಲ್ ನತ್ತ ವಿವೇಚನಾರಹಿತ ರಾಕೆಟ್ ದಾಳಿ ನಡೆಸುವ ಹಮಾಸ್ ಗೂ ಒಪ್ಪುತ್ತದೆ. ಗಾಝಾದ ನಾಗರಿಕರು ಮೂಲಭೂತ ಆಹಾರ, ಔಷಧಿಗಳನ್ನು ಪಡೆಯುವುದನ್ನು ಖಚಿತಪಡಿಸಲು ಇಸ್ರೇಲ್ ಹೆಚ್ಚಿನ ವಿಳಂಬವಿಲ್ಲದೆ ವಿವೇಚನಾಶೀಲ ಪ್ರಯತ್ನಗಳನ್ನು ನಡೆಸುವ ಅಗತ್ಯವಿದೆ ಎಂದು ಕರೀಂಖಾನ್ ಹೇಳಿದ್ದಾರೆ.
ಗಾಝಾಕ್ಕೆ ಅಂತರಾಷ್ಟ್ರೀಯ ನೆರವು ಒದಗಿಸಲು ಈಗ ಇರುವ ಏಕೈಕ ಪ್ರವೇಶದ್ವಾರವಾದ ರಫಾದ ಮೂಲಕ ಸೀಮಿತ ಪ್ರಮಾಣದಲ್ಲಿ ಅಂತರಾಷ್ಟ್ರೀಯ ನೆರವು ಪೂರೈಕೆಯಾಗುತ್ತಿದೆ.
ಸ್ವತಂತ್ರ ನ್ಯಾಯಮಂಡಳಿ
2002ರಲ್ಲಿ ಸ್ಥಾಪನೆಗೊಂಡಿರುವ ಐಸಿಸಿ, ಹತ್ಯಾಕಾಂಡ, ಯುದ್ಧಾಪರಾಧ, ಮಾನವೀಯತೆಯ ವಿರುದ್ಧದ ಅಪರಾಧ ಸೇರಿದಂತೆ ವಿಶ್ವದ ಅತ್ಯಂತ ಕೆಟ್ಟ ಅಪರಾಧಗಳ ತನಿಖೆ ನಡೆಸುವ ಜಗತ್ತಿನ ಏಕೈಕ ಸ್ವತಂತ್ರ ನ್ಯಾಯಮಂಡಳಿಯಾಗಿದೆ. ಫೆಲೆಸ್ತೀನೀಯರು 2015ಕ್ಕೆ ಐಸಿಸಿಯ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ಆದರೆ ಇಸ್ರೇಲ್ ಇದಕ್ಕೆ ಸಹಿ ಹಾಕಿಲ್ಲ ಮತ್ತು ಐಸಿಸಿಯ ತನಿಖೆಯೊಂದಿಗೆ ಸಹಕರಿಸಲು ಅಥವಾ ಅದರ ಅಧಿಕಾರ ವ್ಯಾಪ್ತಿಯನ್ನು ಮಾನ್ಯ ಮಾಡಲು ನಿರಾಕರಿಸಿದೆ.