ಮಾಲ್ಡೀವ್ಸ್ ಅಧ್ಯಕ್ಷರ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತ

Update: 2024-04-22 03:05 GMT

ಹೊಸದಿಲ್ಲಿ: ಮಾಲ್ಡೀವ್ಸ್ ಅಧ್ಯಕ್ಷರಾಗಿ ಕಳೆದ ವರ್ಷ ಅಧಿಕಾರಕ್ಕೆ ವಹಿಸಿಕೊಂಡ ಬಳಿಕ ಎದುರಿಸಿದ ಮೊದಲ ಹಾಗೂ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಮುಹಮ್ಮದ್ ಮುಯಿಝ್ಝು ನೇತೃತ್ವದ ಪಕ್ಷ ಗೆಲುವಿನ ನಗೆ ಬೀರಿದೆ. ಭಾನುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಆಡಳಿತಾರೂಢ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪೀಪಲ್ಸ್ ಮಜ್ಲೀಸ್ನಲ್ಲಿ ಭರ್ಜರಿ ಬಹುಮತ ಗಳಿಸುವ ಸೂಚನೆ ಇದೆ.

ಅಧ್ಯಕ್ಷ ಮುಯಿಝ್ಝು ಭಾರತ ವಿರೋಧಿ ನಿಲುವನ್ನು ಹೊಂದಿದ್ದು, ಇವರ ಗೆಲುವು ಭಾರತದ ಪಾಲಿಗೆ ನಿರಾಶಾದಯಕವಾಗಿದೆ. ಭಾರತ ಮೊದಲು ನೀತಿಯಿಂದ ಹೊರಬಂದು ಚೀನಾದತ್ತ ವಾಲುವ ನಿರ್ಧಾರವನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಮುಯಿಝ್ಝು ಕೈಗೊಂಡಿದ್ದರು. ಇದಕ್ಕೆ ಅಲ್ಲಿನ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಅಧ್ಯಕ್ಷರ ನಿಲುವಿಗೆ ಬಲ ಬಂದಂತಾಗಿದೆ.

ಅಧ್ಯಕ್ಷರ ಪಕ್ಷ ಈ ಬಹುಮತವನ್ನು ಹೊಸ ವಿದೇಶಾಂಗ ನೀತಿಗೆ ಜನತೆಯಿಂದ ಸಿಕ್ಕ ದೃಢೀಕರಣ ಎಂದು ನಂಬಿದ್ದು, ಅದರಲ್ಲೂ ಮುಖ್ಯವಾಗಿ ಮಾಲ್ಡೀವ್ಸ್ನಿಂದ ಭಾರತೀಯ ಪಡೆಯನ್ನು ವಾಪಾಸು ಕಳುಹಿಸಿದ ನಿರ್ಧಾರವನ್ನು ಇಡೀ ದೇಶ ಬೆಂಬಲಿಸಿದಂತಾಗಿದೆ.

ಮ್ಯೂಝು ಅವರ ಮಾಗದರ್ಶಕ ಹಾಗೂ ಚೀನಾ ಪರ ನಾಯಕ ಅಬ್ದುಲ್ಲಾ ಯಮೀನ್ ಪಿಎನ್ಸಿಯಿಂದ ಹೊರಬಂದು ಹೊಸ ಪಕ್ಷವನ್ನು ಕಟ್ಟಿದ್ದು ಮ್ಯೂಝು ಅವರಿಗೆ ದೊಡ್ಡ ಸವಾಲಾಗಿತ್ತು. ಈ ಫಲಿತಾಂಶ ಭಾರತದ ಪರವಾಗಿರುವ ವಿರೋಧ ಪಕ್ಷಗಳಿಗೆ ಹಿನ್ನಡೆಯಾಗಿದ್ದು, ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಸಂಸತ್ತಿನಲ್ಲಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿತ್ತು. ಎಂಡಿಪಿ ಬಹುಮತ ಪಡೆದಿದ್ದರೆ, ಅಧ್ಯಕ್ಷರ ಆಡಳಿತಾತ್ಮಕ ಆದೇಶಗಳ ವಿರುದ್ಧ ಸಂಸತ್ ನಿರ್ಣಯ ಕೈಗೊಳ್ಳಲು ಅವಕಾಶ ಇತ್ತು.

93 ಸದಸ್ಯಬಲದ ಮಜ್ಲೀಸ್ನಲ್ಲಿ ಪಿಎನ್ಸಿ 60 ಸ್ಥಾನಗಳನ್ನು ಗೆದ್ದಿದೆ. ಇದಕ್ಕೂ ಮುನ್ನ 2019ರಲ್ಲಿ ಎಂಡಿಪಿ 65 ಸ್ಥಾನಗಳನ್ನು ಗೆದ್ದು ಬಹುಮತ ಸಂಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News