ಕೆನಡಾಕ್ಕೆ ಬೆಂಬಲ ಸೂಚಿಸಿದ ಬ್ರಿಟನ್
ಲಂಡನ್ : ಕೆನಡಾದ ಕಾನೂನು ಪ್ರಕ್ರಿಯೆಯೊಂದಿಗೆ ಭಾರತ ಸರಕಾರದ ಸಹಕಾರವು ಈ ಗಂಭೀರ ಬೆಳವಣಿಗೆಗೆ ಸಂಬಂಧಿಸಿದ ಅತ್ಯಂತ ಸೂಕ್ತವಾದ ಹೆಜ್ಜೆಯಾಗಿದೆ. ಸಾರ್ವಭೌಮತ್ವ ಮತ್ತು ಕಾನೂನಿನ ನಿಯಮಕ್ಕೆ ಗೌರವ ಅತ್ಯಗತ್ಯ ಎಂದು ಬ್ರಿಟನ್ ಬುಧವಾರ ಹೇಳಿದೆ.
ನಾವು ಕೆನಡಾಕ್ಕೆ ಬೆಂಬಲ ಮುಂದುವರಿಸುತ್ತೇವೆ. ಕೆನಡಾದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ವಿಶ್ವಾಸವಿದೆ. ಭಾರತ ಸರ್ಕಾರಕ್ಕೆ ಸಂಬಂಧಿಸಿರುವ ಕೆನಡಾದ ತನಿಖೆ ಕುರಿತು, ಕೆನಡಾದಲ್ಲಿನ ಸ್ವತಂತ್ರ ತನಿಖೆಗಳಲ್ಲಿ ವಿವರಿಸಿರುವ ಗಂಭೀರ ಬೆಳವಣಿಗೆಗಳ ಕುರಿತು ಕೆನಡಾ ಸರಕಾರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬ್ರಿಟನ್‍ನ `ವಿದೇಶಾಂಗ, ಕಾಮನ್‍ವೆಲ್ತ್ ಮತ್ತು ಅಭಿವೃದ್ಧಿ ಇಲಾಖೆ'(ಎಫ್‍ಸಿಡಿಒ)ಯ ಹೇಳಿಕೆ ತಿಳಿಸಿದೆ. ಬ್ರಿಟನ್ ಮತ್ತು ಕೆನಡಾವು ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮತ್ತು ಅಮೆರಿಕವನ್ನು ಒಳಗೊಂಡ `ಫೈವ್ ಐಸ್'(ಐದು ಕಣ್ಣುಗಳು) ಎಂಬ ಹೆಸರಿನ ಗುಪ್ತಚರ ಒಕ್ಕೂಟದ ಭಾಗವಾಗಿದೆ.
ಮಾಹಿತಿ ಒದಗಿಸಿ: ಸಿಖ್ ಸಮುದಾಯಕ್ಕೆಕೆನಡಾ ಪೊಲೀಸರ ಮನವಿ
ಕೆನಡಾದ ನೆಲದಲ್ಲಿ ನರಹತ್ಯೆಗಳು, ಸುಲಿಗೆ ಮತ್ತು ಬೆದರಿಕೆ ಸೇರಿದಂತೆ ಕೆನಡಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಚಟುವಟಿಕೆಗಳಿಗೆ ಭಾರತ ಸರಕಾರವನ್ನು ಸಂಪರ್ಕಿಸುವ ಆರೋಪಗಳ ಕುರಿತ ತನಿಖೆಗೆ ಪೂರಕವಾದ ಮಾಹಿತಿಯಿದ್ದರೆ ಒದಗಿಸುವಂತೆ ಕೆನಡಾದ ಸಿಖ್ ಸಮುದಾಯದವರಿಗೆ ಕೆನಡಾ ಪೊಲೀಸ್ ಮುಖ್ಯಸ್ಥರು ಸೂಚಿಸಿದ್ದಾರೆ.
ಜನರು ಮುಂದೆ ಬಂದರೆ ನಾವು ಅವರಿಗೆ ಸಹಾಯ ಮಾಡಬಹುದು. ಜನರು ಸುರಕ್ಷಿತವಾಗಿರಲು ಕೆನಡಾಕ್ಕೆ ಬರುತ್ತಾರೆ ಮತ್ತು ಕಾನೂನು ಜಾರಿ ಅಧಿಕಾರಿಗಳಾಗಿ ನಮ್ಮ ಕೆಲಸವೆಂದರೆ ಅವರು ಬದುಕಲು ಸುರಕ್ಷಿತವಾದ ವಾತಾವರಣವನ್ನು ಖಾತರಿಪಡಿಸುವುದು ಎಂದು ಕೆನಡಾ ಪೊಲೀಸ್ ಕಮಿಷನರ್ ಮೈಕ್ ಡ್ಯುಹೆಮ್ ಹೇಳಿದ್ದಾರೆ.
ಟ್ರೂಡೊ ವಿರುದ್ಧ ಕೆನಡಾ ಮಾಧ್ಯಮಗಳ ಟೀಕೆ
ಪ್ರಧಾನಿ ಜಸ್ಟಿನ್ ಟ್ರೂಡೊ ಭಾರತದ ವಿರುದ್ಧ ನಂಬಲರ್ಹವಾದ ಪುರಾವೆಗಳನ್ನು ನೀಡದೆ ಆರೋಪಗಳನ್ನು ಮಾಡಿದ್ದಾರೆ ಮತ್ತು ಖಾಲಿಸ್ತಾನ್ ಬೆದರಿಕೆ ಕುರಿತಂತೆ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ಕೆನಡಾದ ಮಾಧ್ಯಮಗಳು ಟೀಕಿಸಿವೆ.
ಕೆನಡಾವು ತನ್ನ ಗಡಿಯೊಳಗೆ ಸಿಖ್ ಉಗ್ರವಾದದ ಪ್ರವರ್ಧಮಾನಕ್ಕೆ ಅವಕಾಶ ನೀಡಿದೆ. ಸಮುದಾಯ ರಾಜಕೀಯವು ವಿದೇಶಿ ನೀತಿಯ ಮೇಲೆ ಅನಗತ್ಯವಾಗಿ ಪ್ರಭಾವ ಬೀರಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೆನಡಾದ ಪೊಲೀಸ್ ಇಲಾಖೆಯು ಯಾವುದೇ ಪುರಾವೆ ಒದಗಿಸದೆ ಭಾರತದ ವಿರುದ್ಧ ಆರೋಪ ಹೊರಿಸಿದೆ ಎಂದು ಕೆನಡಾದ `ದಿ ನ್ಯಾಷನಲ್ ಪೋಸ್ಟ್' ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತ ಜಾನ್ ಇವಿಸನ್ ಟೀಕಿಸಿದ್ದಾರೆ.