ವಲಸಿಗರನ್ನು ಟೆಂಟ್‍ಗಳಲ್ಲಿ ಇರಿಸಲು ಬ್ರಿಟನ್ ಸರಕಾರ ನಿರ್ಧಾರ: ಮಾಧ್ಯಮಗಳ ವರದಿ

Update: 2023-07-28 17:02 GMT

ಲಂಡನ್: ಮುಂದಿನ ದಿನಗಳಲ್ಲಿ ಸಣ್ಣ ದೋಣಿಗಳ ಮೂಲಕ ಬ್ರಿಟನ್‍ಗೆ ಆಗಮಿಸುವ ವಲಸಿಗರ ಪ್ರಮಾಣದಲ್ಲಿ ಹೆಚ್ಚಳವಾದರೆ ಅವರನ್ನು ಟೆಂಟ್‍ಗಳಲ್ಲಿ ಇರಿಸಲು ಬ್ರಿಟನ್ ಸರಕಾರ ಯೋಚಿಸಿದೆ ಎಂದು ಬ್ರಿಟನ್ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಸುಮಾರು 2,000 ವಲಸಿಗರನ್ನು ಇರಿಸುವ ಸಾಮಥ್ರ್ಯದ ಟೆಂಟ್‍ಗಳನ್ನು ಈಗಾಗಲೇ ಆಂತರಿಕ ಸಚಿವಾಲಯ ಖರೀದಿಸಿದ್ದು ಇವನ್ನು ಆಗಸ್ಟ್ ಅಂತ್ಯದೊಳಗೆ ಬಳಕೆಯಾದ ಮಿಲಿಟರಿ ನೆಲೆಗಳಲ್ಲಿ ಸ್ಥಾಪಿಸುವ ಯೋಜನೆಯಿದೆ. ಕಳೆದ ಬೇಸಿಗೆಯ ಕೊನೆಯಲ್ಲಿ ಆಗ್ನೇಯ ಇಂಗ್ಲೆಂಡ್‍ನ ಕಡಲತೀರದಲ್ಲಿ ವಲಸಿಗರ ಆಗಮನ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಿದ್ದರೂ ಇವರಿಗೆ ಸೂಕ್ತ ನೆಲೆ ಒದಗಿಸಲು ಸರಕಾರ ಇನ್ನೂ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿದೆ. ಅಲ್ಲದೆ ಉದ್ದೇಶಿತ ಟೆಂಟ್ ಯೋಜನೆಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು ಕೆಲವು ಅಧಿಕಾರಿಗಳು ಇದರ ಬಳಕೆಯನ್ನು ಕಾನ್ಸಂಟ್ರೇಷನ್ ಕ್ಯಾಂಪ್(ಬಂಧನ ಶಿಬಿರ)ಗಳಿಗೆ ಹೋಲಿಸುತ್ತಿದ್ದಾರೆ.

ಆಂತರಿಕ ಸಚಿವಾಲಯದ ನಿಯಂತ್ರಣದಲ್ಲಿರುವ ಹೋಟೆಲ್‍ಗಳಲ್ಲಿ ವಲಸಿಗ ಮಕ್ಕಳನ್ನು ದೀರ್ಘಾವಧಿಯವರೆಗೆ ಇರಿಸಿಕೊಳ್ಳುವ ಸರಕಾರದ ವ್ಯವಸ್ಥೆ ಕಾನೂನುಬಾಹಿರ ಎಂದು ಬ್ರಿಟನ್ ಹೈಕೋರ್ಟ್ ತೀರ್ಪುನೀಡಿದ ಹಿನ್ನೆಲೆಯಲ್ಲಿ ಟೆಂಟ್‍ಗಳಲ್ಲಿ ನೆಲೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದೂ ವರದಿ ಹೇಳಿದೆ. ಬ್ರಿಟನ್‍ಗೆ ಆಗಮಿಸುವ ವಲಸಿಗರ ಪ್ರಮಾಣ ಹೆಚ್ಚುತ್ತಿರುವುದು ಸರಕಾರದ ಸಂಪನ್ಮೂಲದ ಮೇಲೆ ಪರಿಣಾಮ ಬೀರಿದೆ.

ಕಳೆದ ವರ್ಷಾಂತ್ಯದ ವೇಳೆಗೆ 1,60,000ಕ್ಕೂ ವಲಸಿಗರು ತಾವು ಆಶ್ರಯ ಕೋರಿ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆಗಾಗಿ ಕಾಯುತ್ತಿದ್ದರು. ಈ ವರ್ಷದ ಆರಂಭದ ಕೆಲವು ತಿಂಗಳಲ್ಲಿ ಇನ್ನಷ್ಟು ವಲಸಿಗರು ಆಗಮಿಸಿದ್ದು ಆಗಸ್ಟ್ ನಿಂದ ಅಕ್ಟೋಬರ್‍ ವರೆಗಿನ ಅವಧಿಯಲ್ಲಿ ವಲಸಿಗರ ಪ್ರಮಾಣ ಹೆಚ್ಚಲಿದೆ ಎಂದು ವರದಿಯಾಗಿದೆ.

ಈ ಮಧ್ಯೆ, ವಲಸಿಗರಿಗೆ ಹೋಟೆಲ್‍ಗಳಲ್ಲಿ ಆಶ್ರಯ ಕಲ್ಪಿಸುವುದು ದುಬಾರಿಯಾಗಿರುವುದರಿಂದ ವೆಚ್ಚ ತಗ್ಗಿಸುವ ವಿವಾದಾತ್ಮಕ ವಸತಿ ನೀತಿಯನ್ನು ಆಂತರಿಕ ಸಚಿವೆ ಸುಯೆಲ್ಲಾ ಬ್ರೆವರ್‍ಮನ್ ಪರಿಚಯಿಸಿದ್ದಾರೆ. ಇದರಂತೆ, ಇಂಗ್ಲೆಂಡಿನ ದಕ್ಷಿಣ ತೀರದಲ್ಲಿ ಲಂಗರು ಹಾಕಿರುವ `ದಿ ಬಿಬ್ಬಿ ಸ್ಟಾಕ್‍ಹೋಮ್' ಎಂಬ ಬೃಹತ್ ಬಾರ್ಜ್‍ನಲ್ಲಿ ಪುರುಷ ವಲಸಿಗರನ್ನು ಇರಿಸಲು ನಿರ್ಧರಿಸಲಾಗಿದ್ದು ಮಂಗಳವಾರ 50 ವಲಸಿಗರನ್ನು ಈ ಬಾರ್ಜ್‍ಗೆ ಸ್ಥಳಾಂತರಿಸಲಾಗಿದೆ.

`ಹೋಟೆಲ್‍ಗಳಲ್ಲಿ ವಲಸಿಗರನ್ನು ಇರಿಸುವುದು ಸ್ವೀಕಾರಾರ್ಹವಲ್ಲ. ಆಶ್ರಯಾರ್ಥಿಗಳಿಗೆ ಅವರ ಆಯ್ಕೆಯ ಮೇಲೆ ನೀಡಲಾಗುವ ವಸತಿ ನಮ್ಮ ಕಾನೂನು ಮತ್ತು ಒಪ್ಪಂದದ ಅವಶ್ಯಕತೆಗಳಿಗೆ ಅನುಗುಣವಾಗಿದೆ' ಎಂದು ಆಂತರಿಕ ಇಲಾಖೆ ಹೇಳಿದೆ.

ಸರಕಾರದ ನಿರ್ಧಾರವನ್ನು ಟೀಕಿಸಿರುವ ವಿಪಕ್ಷ ಲೇಬರ್ ಪಾರ್ಟಿ ` ಟೆಂಟ್‍ಗಳ ಬಳಕೆಯ ವರದಿ ಸರಕಾರದ ವಿಫಲ ನೀತಿಗೆ ನಿದರ್ಶನವಾಗಿದೆ. ಎಲ್ಲಾ ಗೊಂದಲಗಳನ್ನೂ ಅಂತ್ಯಗೊಳಿಸುವುದಾಗಿ ಅವರು ಹೇಳಿದ್ದರು. ಆದರೆ ಅವರ ಯೋಜನೆ ಕಾರ್ಯನಿರ್ವಹಿಸುವ ಬಗ್ಗೆ ಅವರಲ್ಲೇ ಗೊಂದಲವಿದೆ' ಎಂದು ಟ್ವೀಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News