ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮನೆಗೆ ಕಪ್ಪು ಬಟ್ಟೆ ಹೊದಿಸಿ ಪ್ರತಿಭಟನೆ
ಲಂಡನ್: ಉತ್ತರ ಸಮುದ್ರ ತೈಲ ಮತ್ತು ಅನಿಲ ಹೊರತೆಗೆಯುವ ಯೋಜನೆ ವಿಸ್ತರಣೆಯನ್ನು ಬೆಂಬಲಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್‍ರನ್ನು ವಿರೋಧಿಸಿ ಉತ್ತರ ಇಂಗ್ಲೆಂಡಿನಲ್ಲಿರುವ ಸುನಕ್ ಮನೆಗೆ `ಗ್ರೀನ್‍ಪೀಸ್'ನ ಹವಾಮಾನ ಕಾರ್ಯಕರ್ತರು ಕಪ್ಪುಬಟ್ಟೆ ಹೊದಿಸಿ ಪ್ರತಿಭಟನೆ ನಡೆಸಿದ್ದಾರೆ.
ನಾರ್ಥ್ ಯಾರ್ಕ್‍ಶೈರ್‍ನ ರಿಚ್ಮಂಡ್ ನಗರದಲ್ಲಿರುವ ಸುನಕ್ ಮನೆಯ ಛಾವಣಿಯನ್ನು ಏರಿದ ಪ್ರತಿಭಟನಾಕಾರರು ಮನೆಯ ಎದುರು ಭಾಗವನ್ನು ಕಪ್ಪುಬಟ್ಟೆಯಿಂದ ಮುಚ್ಚಿದ್ದಾರೆ. ಜತೆಗೆ ` ರಿಷಿ ಸುನಕ್- ತೈಲದ ಲಾಭ ಮುಖ್ಯವೇ ಅಥವಾ ನಮ್ಮ ಭವಿಷ್ಯ ಮುಖ್ಯವೇ?' ಎಂಬ ಬ್ಯಾನರ್ ಅನ್ನೂ ಮನೆಯ ಎದುರು ಹಾಕಲಾಗಿದೆ.
`ವಿಶ್ವದಾದ್ಯಂತ ಕಾಡ್ಗಿಚ್ಚು ಮತ್ತು ಪ್ರವಾಹಗಳು ಮನೆಗಳನ್ನು ಹಾಗೂ ಜನಜೀವನವನ್ನು ಸರ್ವನಾಶ ಮಾಡುತ್ತಿರುವಾಗ ಸುನಕ್ ತೈಲ ಮತ್ತು ಗ್ಯಾಸ್ ಡ್ರಿಲಿಂಗ್ ವಿಸ್ತರಿಸುವುದಕ್ಕೆ ತನ್ನ ಬದ್ಧತೆಯನ್ನು ಘೋಷಿಸಿದ್ದಾರೆ. ಹೊಸದಾಗಿ ತೈಲ ಮತ್ತು ಅನಿಲ ಹೊರತೆಗೆಯುವ ಯೋಜನೆಯನ್ನು ನಿವಾರಿಸಬೇಕು ಎಂದು ತಜ್ಞರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ. ನಮಗೆ ಬೇಕಿರುವುದು 21ನೇ ಶತಮಾನಕ್ಕೆ ಸೂಕ್ತವಾದ ಶುದ್ಧ, ಕೈಗೆಟಕುವ ಇಂಧನ ವ್ಯವಸ್ಥೆ. ತೈಲದ ಲಾಭ ಮುಖ್ಯವೇ ಅಥವಾ ವಾಸಯೋಗ್ಯ ಭೂಮಿಯಲ್ಲಿ ನಮ್ಮ ಭವಿಷ್ಯ ಮುಖ್ಯವೇ ಎಂಬುದನ್ನು ಸುನಕ್ ನಿರ್ಧರಿಸಲು ಇದು ಸಕಾಲವಾಗಿದೆ' ಎಂದು ಗ್ರೀನ್‍ಪೀಸ್‍ನ ಕಾರ್ಯಕರ್ತ ಫಿಲಿಪ್ ಇವಾನ್ಸ್ ಹೇಳಿದ್ದಾರೆ.
ಸುನಕ್ ತಮ್ಮ ಕುಟುಂಬ ಸದಸ್ಯರೊಂದಿಗೆ ಅಮೆರಿಕ ಪ್ರವಾಸದಲ್ಲಿದ್ದಾರೆ. ಪ್ರತಿಭಟನೆಯ ಮಾಹಿತಿ ತಿಳಿದೊಡನೆ ಪ್ರಧಾನಿಯ ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದ್ದು ಮನೆಯ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.