ಲೆಬನಾನ್ ಸೇನೆಗೆ ಬ್ರಿಟಿಷ್ ಪಡೆಗಳ ತರಬೇತಿ : ವರದಿ

Update: 2024-09-23 16:56 GMT

ಸಾಂದರ್ಭಿಕ ಚಿತ್ರ | PTI

ಲಂಡನ್ : ಸೂಕ್ಷ್ಮ ಕಾರ್ಯಾಚರಣೆಯ ಭಾಗವಾಗಿ ದೇಶದ ಸಶಸ್ತ್ರ ಪಡೆಗಳಿಗೆ ತರಬೇತಿ ಮತ್ತು ಸಲಹೆ ನೀಡಲು ಬ್ರಿಟಿಷ್ ಪಡೆ ಲೆಬನಾನ್‍ನಲ್ಲಿದೆ ಎಂದು `ದಿ ಟೈಮ್ಸ್' ಸೋಮವಾರ ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೇಲ್- ಹಿಜ್ಬುಲ್ಲಾ ನಡುವೆ ಪೂರ್ಣ ಪ್ರಮಾಣದ ಯುದ್ಧದ ಅಪಾಯ ಹೆಚ್ಚಿದ್ದರೂ ತರಬೇತಿ ಕಾರ್ಯಕ್ರಮದ ಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಬ್ರಿಟನ್‍ನ ರಕ್ಷಣಾ ಪಡೆಯ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ಲೆಬನಾನ್‍ನ ಸಶಸ್ತ್ರ ಪಡೆಗಳಿಗೆ ಬ್ರಿಟನ್ ತರಬೇತಿ ನೀಡುತ್ತಿದೆ. ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಿದರೆ ಅದು(ಲೆಬನಾನ್ ಸಶಸ್ತ್ರ ಪಡೆ) ಹಿಜ್ಬುಲ್ಲಾಗಿಂತ ಬಲಿಷ್ಟವಾಗುತ್ತದೆ ಮತ್ತು ದೇಶದ ಭದ್ರತೆ ಕಾಪಾಡಿಕೊಳ್ಳಲು ಸಮರ್ಥವಾಗುತ್ತದೆ ಎಂಬ ವಿಶ್ವಾಸ ಬ್ರಿಟನ್‍ಗಿದೆ.

`ಬ್ರಿಟಿಷ್ ಸೇನೆಯು ಲೆಬನಾನ್ ಸಶಸ್ತ್ರ ಪಡೆಗಳ ಅತ್ಯಂತ ನಿಕಟ ಪಾಲುದಾರನಾಗಿದೆ. ಅವರು ತರಬೇತಿ, ಉಪಕರಣಗಳು ಮತ್ತು ತಾಂತ್ರಿಕ ಸಲಹೆ ನೀಡುವಲ್ಲಿ ತುಂಬಾ ಸಕ್ರಿಯವಾಗಿದ್ದಾರೆ. ನಿರ್ದಿಷ್ಟವಾಗಿ ದಕ್ಷಿಣ ಲೆಬನಾನ್‍ನಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಉದ್ವಿಗ್ನತೆ ಕಡಿಮೆಗೊಳಿಸುವ ಪ್ರಯತ್ನದಲ್ಲಿ ಬ್ರಿಟನ್ ತನ್ನ ಪಾತ್ರವನ್ನು ಸಕ್ರಿಯವಾಗಿ ನಿರ್ವಹಿಸುತ್ತಿದೆ. ಇಸ್ರೇಲ್-ಲೆಬನಾನ್ ಗಡಿಯ ಸನಿಹದಲ್ಲಿ ಇಸ್ರೇಲ್-ಹಿಜ್ಬುಲ್ಲಾ ನಡುವಿನ ಘರ್ಷಣೆ ಉಲ್ಬಣಿಸದಂತೆ ಅಮೆರಿಕ ನೇತೃತ್ವದಲ್ಲಿ ಪ್ರಯತ್ನ ನಡೆಯುತ್ತಿದೆ' ಎಂದು ಬ್ರಿಟನ್‍ಗೆ ಲೆಬನಾನ್ ರಾಯಭಾರಿ ರಾಮಿ ಮೊರ್ಟಾಡಾ ಹೇಳಿದ್ದಾರೆ. ಲೆಬನಾನ್‍ನ ಭೂಭಾಗದ ಮೇಲೆ ಭೂಯುದ್ಧ ಅಥವಾ ತೀವ್ರ ಪ್ರಮಾಣದ ವೈಮಾನಿಕ ದಾಳಿಯನ್ನು ಇಸ್ರೇಲ್ ನಡೆಸಿದರೆ ಲೆಬನಾನ್‍ನ ಸಶಸ್ತ್ರ ಪಡೆಗಳು ಕೈಕಟ್ಟಿ ನಿಲ್ಲುವುದಿಲ್ಲ ಎಂದು ಮೊರ್ಟಾಡಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News