ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿ ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ

Update: 2024-04-06 09:10 GMT

Photo: ungeneva.org/en

ವಿಶ್ವಸಂಸ್ಥೆ: ಯುನೈಟೆಡ್ ನೇಷನ್ಸ್ ಹ್ಯೂಮನ್ ರೈಟ್ಸ್ ಕೌನ್ಸಿಲ್ (ಯುಎನ್‌ಹೆಚ್‌ಆರ್‌ಸಿ) ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡುವುದು ಸೇರಿದಂತೆ ಅನೇಕ ನಿರ್ಣಯಗಳನ್ನು ಅಂಗೀಕರಿಸಿದೆ.

ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ) ಪರವಾಗಿ ಪಾಕಿಸ್ತಾನವು ಜಿನೀವಾ ಕೌನ್ಸಿಲ್‌ನಲ್ಲಿ ನಿರ್ಣಯವನ್ನು ಮಂಡಿಸಿತ್ತು. ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಫೆಲೇಸ್ತೀನಿನ ಪ್ರದೇಶಗಳಲ್ಲಿ ಮಾನವ ಹಕ್ಕುಗಳನ್ನು ಕಾಪಾಡುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿಯಿತು.

ಶುಕ್ರವಾರ ಅಂಗೀಕರಿಸಿದ ನಿರ್ಣಯವು, ಪೂರ್ವ ಜೆರುಸಲೇಂ ಸೇರಿದಂತೆ ಫೆಲೆಸ್ತೀನಿನ ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿದೆ.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಅಕ್ರಮ ದಿಗ್ಬಂಧನ, ಮುತ್ತಿಗೆ ಹಾಕುವುದನ್ನು ತಕ್ಷಣವೇ ತೆಗೆದು ಹಾಕಬೇಕು ಮತ್ತು ಮಾನವೀಯ ನೆರವು ಒದಗಿಸುವ ಸಲುವಾಗಿ ಗಾಝಾದಲ್ಲಿ ತಕ್ಷಣದ ಕದನ ವಿರಾಮ ಘೋಷಿಸಬೇಕು ಎಂದು ಆಗ್ರಹಿಸಿದೆ.

ನಿರ್ಣಯವು ಗಾಝಾದಲ್ಲಿ ಆಕ್ರಮಣದಿಂದಾಗಿ ಜನರು ಹಸಿವಿನಿಂದ ಕಂಗೆಟ್ಟಿರುವುದು, ಮಾನವೀಯ ನೆರವಿಗೆ ಇಸ್ರೇಲ್ ತಡೆಯೊಡ್ಡುತ್ತಿರುವುದು, ಆಹಾರ, ನೀರು, ವಿದ್ಯುತ್, ಇಂಧನ ಮತ್ತು ದೂರಸಂಪರ್ಕ ಸೇರಿದಂತೆ ನಾಗರಿಕರ ಅಗತ್ಯ ಸೌಲಭ್ಯಗಳನ್ನು ತಡೆದಿರುವುದನ್ನು ಖಂಡಿಸಿದೆ.

ಭಾರತ ಮಾತ್ರವಲ್ಲದೇ ಫ್ರಾನ್ಸ್, ಜಪಾನ್, ನೆದರ್ಲ್ಯಾಂಡ್ಸ್ ಮತ್ತು ರೊಮೇನಿಯಾ ಸಹಿತ ಇತರ 13 ದೇಶಗಳು ಮತದಾನಕ್ಕೆ ಗೈರು ಹಾಜರಾಗಿದ್ದವು. ನಿರ್ಣಯದ ವಿರುದ್ಧ ಅಮೆರಿಕ, ಜರ್ಮನಿ ಮತ್ತು ಅರ್ಜೆಂಟೀನಾಗಳು ಮತ ಚಲಾಯಿಸಿದವು.

ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಾ, ಕುವೈತ್, ಮಲೇಷ್ಯಾ, ಖತರ್, ದಕ್ಷಿಣ ಆಫ್ರಿಕಾ, ಯುಎಇ ಮತ್ತು ವಿಯೆಟ್ನಾಂ ಸೇರಿದಂತೆ ಇಪ್ಪತ್ತೆಂಟು ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News