ರಾಜೀನಾಮೆ ಆಗ್ರಹಕ್ಕೆ ಕೆನಡಾ ಪ್ರಧಾನಿ ಟ್ರೂಡೊ ತಿರಸ್ಕಾರ
Update: 2024-10-25 14:54 GMT
ಒಟ್ಟಾವ : ರಾಜೀನಾಮೆ ನೀಡಬೇಕೆಂದು ಪಕ್ಷದ ಕೆಲ ಸದಸ್ಯರು ಆಗ್ರಹವನ್ನು ತಿರಸ್ಕರಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ, ಮುಂಬರುವ ಚುನಾವಣೆಯಲ್ಲೂ ಲಿಬರಲ್ ಪಕ್ಷದ ನೇತೃತ್ವವನ್ನು ವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ನಾಲ್ಕನೇ ಅವಧಿಗೆ ಪ್ರಧಾನಿಯಾಗಲು ಜಸ್ಟಿನ್ ಟ್ರೂಡೊ ಬಯಸಿದ್ದು ಕೆನಡಾದಲ್ಲಿ ಕಳೆದ ಸುಮಾರು 100 ವರ್ಷಗಳಲ್ಲಿ ಯಾವುದೇ ಪ್ರಧಾನಿ ಸತತ 4 ಬಾರಿ ಗೆಲುವು ಸಾಧಿಸಿಲ್ಲ. ಬುಧವಾರ ಟ್ರೂಡೊ ನೇತೃತ್ವದಲ್ಲಿ ನಡೆದ ಲಿಬರಲ್ ಪಕ್ಷದ ಸಭೆಯಲ್ಲಿ ಮುಂದಿನ ಚುನಾವಣೆಗೂ ಮುನ್ನ ಪದತ್ಯಾಗ ಮಾಡುವಂತೆ 20 ಲಿಬರಲ್ ಸಂಸದರು ಆಗ್ರಹಿಸಿ ಸಹಿ ಹಾಕಿದ ಪತ್ರವನ್ನು ಸಲ್ಲಿಸಿದ್ದರು.
ಸಭೆಯ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಟ್ರೂಡೊ `ಸುದೀರ್ಘ ಮಾತುಕತೆಗಳ ಬಳಿಕ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನನ್ನನ್ನೇ ಆಯ್ಕೆ ಮಾಡಲಾಗಿದೆ' ಎಂದರು. ಸಂಸತ್ ನ ಕೆಳಮನೆ ಹೌಸ್ ಆಫ್ ಕಾಮನ್ಸ್ ನಲ್ಲಿ ಟ್ರೂಡೊಗೆ ಲಿಬರಲ್ ಪಕ್ಷದ 153 ಸದಸ್ಯರ ಭರ್ಜರಿ ಬೆಂಬಲವಿದೆ.