12 ತಿಂಗಳ ಅವಧಿಯಲ್ಲಿ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ 96,917 ಭಾರತೀಯರ ಸೆರೆ
ವಾಶಿಂಗ್ಟನ್: 2022ರ ಆಕ್ಟೋಬರ್ ಹಾಗೂ 2023ರ ಸೆಪ್ಟೆಂಬರ್ ನಡುವೆ ಅಮೆರಿಕಕ್ಕೆ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ 96,917 ಭಾರತೀಯರನ್ನು ಸೆರೆಹಿಡಿಯಲಾಗಿದೆಯೆಂದು ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ಸಂರಕ್ಷಣಾ ಇಲಾಖೆಯ ಇತ್ತೀಚಿನ ವರದಿಯೊಂದು ತಿಳಿಸಿದೆ.
ಬಂಧಿತರಾದ 96,917 ಭಾರತೀಯರ ಪೈಕಿ 30,010 ಮಂದಿ ಕೆನಡದ ಗಡಿ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದರು ಹಾಗೂ 41,770 ಮಂದಿ ಮೆಕ್ಸಿಕೊ ಗಡಿಯಿಂದ ನುಸುಳಲು ಯತ್ನಿಸಿದ್ದರು. ಉಳಿದ 25,317 ಮಂದಿ ಅಮೆರಿಕ ಮುಖ್ಯಭೂಮಿಯನ್ನು ಪ್ರವೇಶಿಸಿದಾಗ ಸೆರೆಸಿಕ್ಕಿದ್ದರು.
ಇದೇ ಅವಧಿಯಲ್ಲಿ ಅಮೆರಿಕಕ್ಕೆ ಕಾನೂನುಬದ್ಧವಾಗಿ ಬಂದು ನೆಲೆಸಿದ ಅಥವಾ ಪ್ರವಾಸಕ್ಕಾಗಿ ಆಗಮಿಸಿದ ಭಾರತೀಯರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ. 2 ಕೋಟಿಗೂ ಅಧಿಕ ಭಾರತೀಯರು ತಮ್ಮ ರಜಾಪ್ರವಾಸದ ತಾಣವಾಗಿ ವಿದೇಶಿ ರಾಷ್ಟ್ರಗಳನ್ನು ಆಯ್ದುಕೊಂಡಿದ್ದರು ಎಂಬುದಾಗಿಯೂ ವರದಿ ತಿಳಿಸಿದೆ.
ಇದರ ಜೊತೆಗೆ ಪ್ರಸಕ್ತ ಮೂರು ಕೋಟಿಗೂ ಅಧಿಕ ಭಾರತೀಯರು ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರನ್ನು ಸಾಮಾನ್ಯವಾಗಿ ಸಾಗರೋತ್ತರ ಭಾರತೀಯರೆಂದು ಪರಿಗಣಿಸಲಾಗುತ್ತದೆ. ಪ್ರಸಕ್ತ 3,21,00,340 ಮಂದಿ ಸಾಗರೋತ್ತರ ದೇಶಗಳಲ್ಲಿ ನೆಲೆಸಿದ್ದಾರೆ. ಈ ಪೈಕಿ 1,34,59,195 ಮಂದಿ ಅನಿವಾಸಿ ಭಾರತೀಯರು ಹಾಗೂ 1,86,83,645 ಮಂದಿ ಭಾರತ ಮೂಲದ ನಾಗರಿಕ (ಪಿಐಓ)ರಾಗಿದ್ದಾರೆ.