ಚೀನಾ ಪರ ಬ್ರಿಟನ್ ಪ್ರಜೆಯ ಬೇಹುಗಾರಿಕೆ ಪ್ರಕರಣ
ಲಂಡನ್: ಚೀನಾದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬ್ರಿಟನ್ ಸಂಸದೀಯ ಸಂಶೋಧಕನನ್ನು ಬಂಧಿಸಿರುವ ಪ್ರಕರಣದಲ್ಲಿ, ಚೀನಾವನ್ನು ಬ್ರಿಟನ್ ಭದ್ರತೆಗೆ ಬೆದರಿಕೆಯ ದೇಶ ಎಂದು ಹೆಸರಿಸುವಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಮೇಲೆ ಸ್ವಪಕ್ಷೀಯ ಸಂಸದರು ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ವರದಿಯಾಗಿದೆ.
ಅಧಿಕೃತ ರಹಸ್ಯ ಕಾಯ್ದೆಯಡಿ ಬಂಧಿತ ವ್ಯಕ್ತಿ 20 ವರ್ಷದವನಾಗಿದ್ದು ಈತ ಸಂಸದೀಯ ಸಂಶೋಧಕನಾಗಿ ಕೆಲಸ ಮಾಡುತ್ತಿದ್ದು ಭದ್ರತಾ ಸಚಿವ ಟಾಮ್ ತುಗೆಂಧತ್ ಸೇರಿದಂತೆ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ಸಂಸದರೊಂದಿಗೆ ಸಂಪರ್ಕ ಹೊಂದಿದ್ದಾನೆ. ಈತ ಈ ಹಿಂದೆ `ಚೀನಾ ವ್ಯವಹಾರ ಮತ್ತು ಅಂತರಾಷ್ಟ್ರೀಯ ನೀತಿ' ಸಮಿತಿಯಲ್ಲೂ ಕಾರ್ಯ ನಿರ್ವಹಿಸಿದ್ದ ಮತ್ತು ಚೀನಾದಲ್ಲಿಯೂ ಕೆಲಸ ಮಾಡಿದ್ದ ಎಂದು `ಸಂಡೆ ಟೈಮ್ಸ್' ವರದಿ ಮಾಡಿದೆ.
ಈ ಬೆಳವಣಿಗೆಗಳ ಬಗ್ಗೆ ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಚೀನಾದ ಪ್ರೀಮಿಯರ್ ಲಿ ಖ್ವಿಯಾಂಗ್ ಜತೆ ಪ್ರಸ್ತಾವಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ `ಇದು ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲದ ಕ್ರಮ' ಎಂದಿದ್ದಾರೆ.
ಈ ಮಧ್ಯೆ, ಬ್ರಿಟನ್ನ ಸುರಕ್ಷತೆ ಮತ್ತು ಹಿತಾಸಕ್ತಿಗಳಿಗೆ ಚೀನಾ ಬೆದರಿಕೆ ಎಂದು ಅಧಿಕೃತವಾಗಿ ಘೋಷಿಸಬೇಕೆಂಬುದು ಬ್ರಿಟನ್ನ ಗೃಹ ಸಚಿವೆ ಸುಯೆಲ್ಲಾ ಬ್ರೆವರ್ಮನ್ ಬಯಸಿದ್ದಾರೆ. ಆದರೆ ಸಂಶೋಧಕನ ಬಂಧನದ ಹೊರತಾಗಿಯೂ ಚೀನಾವನ್ನು ಬ್ರಿಟನ್ ಭದ್ರತೆಗೆ ಬೆದರಿಕೆ ಎಂದು ಹೆಸರಿಸಲು ಸರಕಾರದ ನಿರಾಕರಣೆಯ ಬಳಿಕ ಪ್ರಧಾನಿಯ ವಿರುದ್ಧ ಸಚಿವರಲ್ಲಿ ಅಸಮಾಧಾನ ಹೆಚ್ಚಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಬೇಹುಗಾರಿಕೆ ಪ್ರಕರಣದ ಬಗ್ಗೆ ಆಡಳಿತ ಪಕ್ಷದ ಸಂಸದರಿಗೆ ಮಾಹಿತಿ ನೀಡಿಲ್ಲ ಅಥವಾ ಚೀನಾದ ಕುರಿತ ಸರಕಾರದ ಕಾರ್ಯತಂತ್ರ ಮತ್ತು ಧೋರಣೆಯ ಕುರಿತು ಮಾಹಿತಿ ನೀಡಿಲ್ಲ ಎಂದು ಮತ್ತೆ ಇಬ್ಬರು ಸಚಿವರು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ಇಲಾಖೆಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ಸ್ಪಷ್ಟ ಪುರಾವೆಯಿದ್ದರೂ ಚೀನಾದ ವಿರುದ್ಧ ಯಾಕೆ ಮೃದುಧೋರಣೆ ತಳೆಯಲಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಪ್ರಧಾನಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಯಾಕೆಂದರೆ ಈ ಪ್ರಕರಣವನ್ನು ಸರಕಾರ ನಿರ್ವಹಿಸುತ್ತಿರುವ ವಿಷಯದಲ್ಲಿ ವ್ಯಾಪಕ ಅಸಮಾಧಾನದ ಅಲೆ ಎದ್ದಿದೆ' ಎಂದು ಒಬ್ಬ ಸಚಿವರು ಹೇಳಿದ್ದಾರೆ.
ತನಗೆ ಬೇಕಾದ್ದನ್ನು ಪಡೆಯಲು ದೀರ್ಘಕಾಲದಿಂದ ಬೇಹುಗಾರಿಕೆ ಮತ್ತು ಆರ್ಥಿಕ ಬಲಾತ್ಕಾರದ ಕ್ರಮಗಳನ್ನು ಅನುಸರಿಸುತ್ತಿರುವ ದೇಶದೊಂದಿಗೆ ನಾವು ವ್ಯವಹರಿಸುತ್ತಿದ್ದೇವೆ. ಚೀನಾವು ತನ್ನ ಅಗತ್ಯದ ಆಧಾರಕ್ಕೆ ಸಂಬಂಧಿಸಿದ ದೀರ್ಘಾವಧಿಯ ಕಾರ್ಯತಂತ್ರವನ್ನು ಹೊಂದಿದೆ. ಆದರೆ ನಮಗೇಕೆ ಅದು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಆರೋಪಗಳು ಕಪೋಲ ಕಲ್ಪಿತ ಮತ್ತು ಚೀನಾಕ್ಕೆ ಕಳಂಕ ತರುವ ಪ್ರಯತ್ನವಾಗಿದೆ ಎಂದು ಚೀನಾ ಪ್ರತಿಕ್ರಿಯಿಸಿದೆ.
ಈ ಮಧ್ಯೆ ಆರೋಪ ನಿರಾಕರಿಸಿರುವ ಬಂಧಿತ ಸಂಶೋಧಕ `ನನ್ನ ವೃತ್ತಿಜೀವನದ ಉದ್ದಕ್ಕೂ ಚೀನೀ ಕಮ್ಯುನಿಸ್ಟ್ ಪಕ್ಷದಿಂದ ಎದುರಾಗಿರುವ ಸವಾಲು ಮತ್ತು ಬೆದರಿಕೆಯನ್ನು ಎತ್ತಿತೋರಿಸಿದ್ದೇನೆ' ಎಂದಿದ್ದಾರೆ. ಪೊಲೀಸರು ಈತನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ತನ್ನ ವಕೀಲರ ಮೂಲಕ ಹೇಳಿಕೆ ಬಿಡುಗಡೆಗೊಳಿಸಿರುವ ಆರೋಪಿ `ನಾನೊಬ್ಬ ಚೀನಾದ ಗೂಢಚಾರ ಎಂಬ ಮಾಧ್ಯಮಗಳ ಆರೋಪಕ್ಕೆ ಪ್ರತಿಕ್ರಿಯಿಸಬೇಕೆಂದು ಬಲವಂತ ಪಡಿಸಲಾಗುತ್ತಿದೆ. ಆದರೆ ತಪ್ಪು ವರದಿಯ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬದ್ದನಾಗಿಲ್ಲ. ಮಾಧ್ಯಮಗಳಲ್ಲಿ ಯಾವುದೇ ಆರೋಪ ವರದಿಯಾಗಲಿ, ನಾನು ನಿರಪರಾಧಿ ಎಂಬುದು ಎಲ್ಲರಿಗೂ ತಿಳಿದಿದೆ. ಅತಿರಂಜಿತ ಸುದ್ಧಿಯಲ್ಲಿ ನನ್ನ ವಿರುದ್ಧ ಏನನ್ನು ಹೇಳಲಾಗಿದೆಯೋ ಅದನ್ನು ಮಾಡುವುದು ನನ್ನ ಸಂಕಲ್ಪಕ್ಕೆ ವಿರುದ್ಧವಾಗಿದೆ' ಎಂದಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚೀನಾದ ಹಸ್ತಕ್ಷೇಪ : ರಿಷಿ ಸುನಕ್ ಕಳವಳ
ಚೀನಾದ ಪರ ಬೇಹುಗಾರಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣವನ್ನು ಜಿ20 ಶೃಂಗಸಭೆಯಲ್ಲಿ ಚೀನಾದ ಪ್ರೀಮಿಯರ್ ಜತೆ ಪ್ರಸ್ತಾವಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ `ಪ್ರಜಾಪ್ರಭುತ್ವದಲ್ಲಿ ಚೀನಾದ ಹಸ್ತಕ್ಷೇಪಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದರು' ಎಂದು ಸರಕಾರದ ಮೂಲಗಳು ಹೇಳಿವೆ.
ಭಿನ್ನಾಭಿಪ್ರಾಯದ ಕ್ಷೇತ್ರಗಳಲ್ಲಿ ನಾವು ಹೊಂದಿರುವ ಕಳವಳವನ್ನು, ವಿಶೇಷವಾಗಿ ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಯಾವುದೇ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಚೀನಾದ ನಿಯೋಗಕ್ಕೆ ಸ್ಪಷ್ಟಪಡಿಸಿದ್ದೇನೆ. ಬದಿಯಲ್ಲಿ ನಿಂತು ಕೂಗುವ ಬದಲು, ನಿರ್ದಿಷ್ಟ ವಿಷಯವನ್ನು ಪ್ರಸ್ತಾವಿಸಿ ನಮ್ಮ ಕಳವಳವನ್ನು ನೇರವಾಗಿ ತಿಳಿಸುವುದು ಉತ್ತಮ' ಎಂದು ಬ್ರಿಟನ್ ಮಾಧ್ಯಮಗಳಿಗೆ ಸುನಕ್ ಪ್ರತಿಕ್ರಿಯಿಸಿದ್ದಾರೆ