ಅಫ್ಘಾನ್, ಇರಾಕ್, ಉಕ್ರೇನ್ ಯುದ್ಧಕ್ಕೆ ನೇಟೊವನ್ನು ದೂಷಿಸಿದ ಚೀನಾ
ಬೀಜಿಂಗ್ : ನೇಟೊ ಅಪಶ್ರುತಿಯ ಮೂಲವಾಗಿರುವುದರಿಂದ ಅಫ್ಘಾನಿಸ್ತಾನ, ಇರಾಕ್, ಲಿಬಿಯಾ ಮತ್ತು ಉಕ್ರೇನ್ನಅಲ್ಲಿ ಯುದ್ಧಗಳನ್ನು ಬಿಚ್ಚಿಟ್ಟಿದೆ ಎಂದು ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಝಾಂಗ್ ಕ್ಸಿಯೊಗಾಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
` ನೇಟೊ ಯುದ್ಧದ ಅವ್ಯವಸ್ಥೆಯನ್ನು ಬಿತ್ತುವ ಯಂತ್ರವಾಗಿದೆ. ಇದು ಉಕ್ರೇನ್, ಅಫ್ಘಾನಿಸ್ತಾನ, ಇರಾಕ್ ಮತ್ತು ಲಿಬಿಯಾದ ಪ್ರದೇಶದಲ್ಲಿ ಯುದ್ಧ ಮತ್ತು ದುರಂತದ ಜ್ವಾಲೆಯನ್ನು ತಂದಿದೆ. ಇತ್ತೀಚಿನ ವರ್ಷಗಳಲ್ಲಿ ನೇಟೊ ಏಶ್ಯಾ-ಪೆಸಿಫಿಕ್ ವಲಯಗಳಲ್ಲಿ ತನ್ನ ದುಷ್ಟ ಗಾಳವನ್ನು ಮುಂದುವರಿಸಿದೆ. ಚೀನಾದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೇಟೊ, ಹೀಗೆ ಮಾಡುವಂತೆ ಇತರ ದೇಶಗಳ ಮೇಲೆಯೂ ಒತ್ತಡ ಹೇರುತ್ತಿದೆ' ಎಂದವರು ಹೇಳಿರುವುದಾಗಿ ರಶ್ಯದ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಮೆರಿಕದ ವಾಷಿಂಗ್ಟನ್ ನಲ್ಲಿ ನಡೆದ ನೇಟೊ ಶೃಂಗಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಅವರು `ಈ ನಿರ್ಣಯ ಸುಳ್ಳು, ಪೂರ್ವಾಗ್ರಹ, ಪ್ರಚೋದನೆ ಮತ್ತು ನಿಂದನೆಗಳಿಂದ ಕೂಡಿದೆ. ಈ ಬಗ್ಗೆ ನಾವು ತೀವ್ರ ಅತೃಪ್ತಿ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ' ಎಂದು ಉತ್ತರಿಸಿದರು.
ನೇಟೊ ಶೃಂಗಸಭೆಯಲ್ಲಿ ಹೊರಡಿಸಲಾದ ನಿರ್ಣಯದಲ್ಲಿ `ಚೀನಾವು ಯುರೋ-ಅಟ್ಲಾಂಟಿಕ್ ಭದ್ರತೆಗೆ ವ್ಯವಸ್ಥಿತ ಸವಾಲುಗಳನ್ನು ಒಡ್ಡುತ್ತಿದೆ. ಉಕ್ರೇನ್ನ`ಲ್ಲಿ ರಶ್ಯ ನಡೆಸುತ್ತಿರುವ ಆಕ್ರಮಣಕ್ಕೆ ವಸ್ತುರೂಪದ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ಚೀನಾ ನಿಲ್ಲಿಸಬೇಕು' ಎಂದು ಆಗ್ರಹಿಸಲಾಗಿದೆ.