ಮಾಲ್ದೀವ್ಸ್ ಗೆ 1,500 ಟನ್ ಟಿಬೆಟ್ ಹಿಮನೀರು ಕಳಿಸಿದ ಚೀನಾ

Update: 2024-05-25 17:04 GMT

ಮಾಲೆ: ಟಿಬೆಟ್‍ನ ಹಿಮನದಿಗಳ 1,500 ಟನ್‍ಗಳಷ್ಟು ನೀರನ್ನು ಚೀನಾ ಮಾಲ್ದೀವ್ಸ್ ಗೆ ಒದಗಿಸಿದ್ದು ದ್ವೀಪರಾಷ್ಟ್ರದಲ್ಲಿ ಕುಡಿಯುವ ಶುದ್ಧನೀರು ಪೂರೈಸಲು ಇದು ನೆರವಾಗಲಿದೆ ಎಂದು ಸರಕಾರದ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಮಾರ್ಚ್‍ನಲ್ಲಿಯೂ ಮಾಲ್ದೀವ್ಸ್ ಗೆ ಇಷ್ಟೇ ಪ್ರಮಾಣದ ಶುದ್ಧನೀರನ್ನು ಚೀನಾ ಒದಗಿಸಿತ್ತು. 2023ರ ನವೆಂಬರ್ ನಲ್ಲಿ ಚೀನಾ ಪರ ನಿಲುವು ಹೊಂದಿರುವ ಮುಹಮ್ಮದ್ ಮುಯಿಝು ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾಲ್ದೀವ್ಸ್ ಗೆ ಹಲವು ನೆರವಿನ ಯೋಜನೆಗಳನ್ನು ಚೀನಾ ಘೋಷಿಸಿದೆ. ಜತೆಗೆ, ಮಾಲ್ದೀವ್ಸ್‍ನ ಹವಾಮಾನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಚೀನಾ ನೆರವಾಗುತ್ತಿದೆ ಎಂದು ಮಾಲ್ದೀವ್ಸ್‍ನ ವಿದೇಶಾಂಗ ಇಲಾಖೆ ಹೇಳಿದೆ.

ಈ ಮಧ್ಯೆ, ಮಿಂಚು ಮತ್ತು ಗುಡುಗಿನ ಅಪಾಯದ ಬಗ್ಗೆ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಚೀನಾದ ನೆರವಿನಿಂದ ಸ್ಥಾಪಿಸುವ ಪ್ರಯತ್ನ ಮುಂದುವರಿದಿದೆ ಎಂದು ಮಾಲ್ದೀವ್ಸ್ ನ ಸರಕಾರಿ ಸ್ವಾಮ್ಯದ ಪಿಎಸ್‍ಎಂ ನ್ಯೂಸ್ ಸರ್ವಿಸ್ ವರದಿ ಮಾಡಿದೆ. ಮಾಲ್ದೀವ್ಸ್ ನಲ್ಲಿ ಸಾಗರ ವೀಕ್ಷಣೆ ಮತ್ತು ಮುನ್ಸೂಚನೆ ಸಾಮರ್ಥ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಚೀನಾದ ಸಮುದ್ರಶಾಸ್ತ್ರ ಸಂಸ್ಥೆಯೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

--

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News