ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಜಿಂಪಿಂಗ್ ಗೈರು

Update: 2023-09-04 16:26 GMT

.ಕ್ಸಿಜಿಂಪಿಂಗ್ | Photo: PTI

ಬೀಜಿಂಗ್: ಈ ವಾರ ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ಹಾಜರಾಗುವುದಿಲ್ಲ. ಚೀನಾದ ನಿಯೋಗದ ನೇತೃತ್ವವನ್ನು ಪ್ರೀಮಿಯರ್ ಲಿ ಕ್ವಿಯಾಂಗ್ ವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಘೋಷಿಸಿದೆ.

`ಭಾರತ ಸರಕಾರದ ಆಹ್ವಾನದ ಮೇರೆಗೆ, ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 9 ಮತ್ತು 10ರಂದು ನಡೆಯಲಿರುವ 18ನೇ ಜಿ20 ಶೃಂಗಸಭೆಯಲ್ಲಿ ರಾಷ್ಟ್ರೀಯ ಕೌನ್ಸಿಲ್‍ನ ಪ್ರೀಮಿಯರ್ ಲಿ ಕ್ವಿಯಾಂಗ್ ಪಾಲ್ಗೊಳ್ಳಲಿದ್ದಾರೆ' ಎಂದು ಚೀನೀ ವಿದೇಶಾಂಗ ಇಲಾಖೆಯ ವಕ್ತಾರ ಮಾವೊ ನಿಂಗ್ ಹೇಳಿಕೆ ನೀಡಿದ್ದಾರೆ. ಭಾರತ ಮೊದಲ ಬಾರಿಗೆ ಆಯೋಜಿಸಿರುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಅಧ್ಯಕ್ಷ ಜಿಂಪಿಂಗ್ ಗೈರು ಹಾಜರಾಗಲು ಕಾರಣವೇನು ಎಂಬ ಬಗ್ಗೆ ಇಲಾಖೆ ಮಾಹಿತಿ ನೀಡಿಲ್ಲ.

ಇಂಡೊನೇಶ್ಯಾದ ಜಕಾರ್ತದಲ್ಲಿ ಸೆಪ್ಟಂಬರ್ 5ರಿಂದ 8ರವರೆಗೆ ನಡೆಯಲಿರುವ ಆಸಿಯಾನ್ ಶೃಂಗಸಭೆ, 18ನೇ ಪೂರ್ವ ಏಶಿಯಾ ಶೃಂಗಸಭೆಯಲ್ಲೂ ಲಿ ಕ್ವಿಯಾಂಗ್ ಚೀನಾ ನಿಯೋಗವನ್ನು ಮುನ್ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆಯ ಮತ್ತೊಬ್ಬ ವಕ್ತಾರ ವಾಂಗ್ ವೆನ್‍ಬಿನ್ ಇದೇ ಸಂದರ್ಭ ಘೋಷಿಸಿದ್ದಾರೆ.

ಚೀನಾದಲ್ಲಿ ಜಾರಿಯಲ್ಲಿದ್ದ ಕೋವಿಡ್ ನಿರ್ಬಂಧದಿಂದಾಗಿ 2021ರಲ್ಲಿ ಇಟಲಿಯಲ್ಲಿ ನಡೆದಿದ್ದ ಜಿ20 ಶೃಂಗಸಭೆಯಲ್ಲೂ ಕ್ಸಿಜಿಂಪಿಂಗ್ ಪಾಲ್ಗೊಂಡಿರಲಿಲ್ಲ. ಚೀನಾ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಚೀನಾ ಅಧ್ಯಕ್ಷರು ಕೈಗೊಂಡಿರುವ ಈ ನಿರ್ಧಾರ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ತೊಡಕಾಗುವ ಸಾಧ್ಯತೆಯಿದೆ.

`ಉಕ್ರೇನ್‍ನಲ್ಲಿ ನಡೆಯುತ್ತಿರುವ ವಿಶೇಷ ಮಿಲಿಟರಿ ಕಾರ್ಯಾಚರಣೆ'ಯ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ವೈಯಕ್ತಿಕವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈಗಾಗಲೇ ಹೇಳಿದ್ದಾರೆ. ಕಳೆದ ನವೆಂಬರ್ನಲ್ಲಿ ಬಾಲಿಯಲ್ಲಿ ನಡೆದಿದ್ದ ಶೃಂಗಸಭೆಯಲ್ಲೂ ಪುಟಿನ್ ಪಾಲ್ಗೊಂಡಿರಲಿಲ್ಲ.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಝಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೊನೇಶ್ಯಾ, ಇಟಲಿ, ಜಪಾನ್, ಕೊರಿಯಾ ಗಣರಾಜ್ಯ, ಮೆಕ್ಸಿಕೊ, ರಶ್ಯ, ಸೌದಿ ಅರೆಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಜಿ20 ಒಕ್ಕೂಟದ ಸದಸ್ಯರಾಗಿದ್ದು ಈ ದೇಶಗಳು ಜಾಗತಿಕ ಜಿಡಿಪಿಯ ಸುಮಾರು 85%ದಷ್ಟು, ಜಾಗತಿಕ ವ್ಯಾಪಾರದ 75%ದಷ್ಟು ಮತ್ತು ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರಮಾಣವನ್ನು ಹೊಂದಿವೆ.

ಜಿಂಪಿಂಗ್ ನಿರ್ಧಾರದಿಂದ ಬೇಸರವಾಗಿದೆ: ಬೈಡನ್

ವಾಷಿಂಗ್ಟನ್,: ಈ ವಾರ ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರು ಪಾಲ್ಗೊಳ್ಳುವುದಿಲ್ಲ ಎಂಬ ವರದಿಯಿಂದ ಬೇಸರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

`ನನಗೆ ಬೇಸರವಾಗಿದೆ. ಆದರೆ ಅವರನ್ನು ಭೇಟಿಯಾಗುವ ವಿಶ್ವಾಸವಿದೆ' ಎಂದು ಮಾಧ್ಯಮದವರ ಪ್ರಶ್ನೆಗೆ ಬೈಡನ್ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಬೈಡನ್- ಜಿಂಪಿಂಗ್ ಭೇಟಿಯ ನಿರೀಕ್ಷೆಯಿತ್ತು. ಇದೀಗ ಜಿಂಪಿಂಗ್ ಗೈರಾಗಲಿರುವುದರಿಂದ ನವೆಂಬರ್ನಲ್ಲಿ ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿ ನಡೆಯುವ ಅಪೆಕ್ ಸಮಾವೇಶದಲ್ಲಿ ಇಬ್ಬರು ಮುಖಂಡರು ಭೇಟಿಯಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News