ದಕ್ಷಿಣ ಕೊರಿಯಾವನ್ನು ವಶಪಡಿಸಿಕೊಳ್ಳಲು ಸಾಂವಿಧಾನಿಕ ಬದಲಾವಣೆ ಅಗತ್ಯ: ಕಿಮ್ ಜಾಂಗ್ ಉನ್

Update: 2024-01-16 18:08 GMT

Photo:PTI

ಪ್ಯೋಂಗ್ಯಾಂಗ್ : ಯುದ್ಧದಲ್ಲಿ ದಕ್ಷಿಣ ಕೊರಿಯಾವನ್ನು ವಶಪಡಿಸಿಕೊಳ್ಳಲು ಸಾಂವಿಧಾನಿಕ ಬದಲಾವಣೆ ಅಗತ್ಯವಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಪ್ರತಿಪಾದಿಸಿರುವುದಾಗಿ ಸರಕಾರಿ ಸ್ವಾಮ್ಯದ ಕೆಸಿಎನ್‍ಎ ಸುದ್ಧಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಇದೇ ವೇಳೆ, ದಕ್ಷಿಣ ಕೊರಿಯಾದೊಂದಿಗೆ ಸಹಕಾರ ಮತ್ತು ಪುನರೇಕೀಕರಣವನ್ನು ಉತ್ತೇಜಿಸುವ ಪ್ರಮುಖ ಸರಕಾರಿ ಏಜೆನ್ಸಿಗಳನ್ನು ಉತ್ತರ ಕೊರಿಯಾ ಔಪಚಾರಿಕವಾಗಿ ರದ್ದುಗೊಳಿಸಿದೆ.

ಈ ನಿರ್ಧಾರವನ್ನು ಉತ್ತರ ಕೊರಿಯಾದ ಸಂಸತ್ ಅನುಮೋದಿಸಿದೆ. ಇತ್ತೀಚೆಗೆ ಉತ್ತರ ಕೊರಿಯಾ ನಡೆಸುತ್ತಿರುವ ಫಿರಂಗಿ ಗುಂಡುಗಳ ಸಹಿತ ಸೇನಾ ಕವಾಯತು, ಕ್ಷಿಪಣಿ ಪರೀಕ್ಷೆ ಮುಂತಾದ ಕ್ರಮಗಳ ಮುಂದುವರಿದ ಭಾಗ ಇದಾಗಿದೆ ಎಂದು ವರದಿ ಹೇಳಿದೆ. ಸಂಸತ್‍ನಲ್ಲಿ ಮಾತನಾಡಿದ ಕಿಮ್ `ದಕ್ಷಿಣ ಕೊರಿಯಾವನ್ನು ಅತ್ಯಂತ ಪ್ರತಿಕೂಲ ದೇಶ'ವೆಂದು ವ್ಯಾಖ್ಯಾನಿಸುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಹೊಸ ಕಾನೂನುಕ್ರಮ ರೂಪಿಸುವಂತೆ ಕರೆ ನೀಡಿದರು. `ಯುದ್ಧದ ಸಂದರ್ಭದಲ್ಲಿ ದಕ್ಷಿಣ ಕೊರಿಯಾವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು, ನಿಗ್ರಹಿಸಿ, ಮರುಪಡೆಯುವ ಮತ್ತು ಅದನ್ನು ನಮ್ಮ ಗಣರಾಜ್ಯದ ಭೂ ಪ್ರದೇಶದೊಳಗೆ ಸೇರಿಸುವ ವಿಷಯವನ್ನು' ಈ ಕ್ರಮ ಪ್ರತಿಬಿಂಬಿಸಬೇಕು ಎಂದು ಕಿಮ್ ಆಗ್ರಹಿಸಿದ್ದಾರೆ.

ದಕ್ಷಿಣ ಕೊರಿಯಾವು ನಮ್ಮ ದೊಡ್ಡ ಶತ್ರುವಾಗಿದೆ ಮತ್ತು ಆ ದೇಶದೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನ ಮುಂದುವರಿಸುವುದು ಪ್ರಮಾದವಾಗಲಿದೆ ಎಂದು ಇದಕ್ಕೂ ಮುನ್ನ ಕಿಮ್ ಹೇಳಿದ್ದರು.

ಇದುವರೆಗೆ ರಾಜತಾಂತ್ರಿಕ ಸಂಬಂಧಗಳನ್ನು ದಕ್ಷಿಣ ಕೊರಿಯಾದ `ಏಕೀಕರಣ ಸಚಿವಾಲಯ' ಮತ್ತು ಉತ್ತರ ಕೊರಿಯಾದ `ಶಾಂತಿಯುತ ಪುನರೇಕೀಕರಣಕ್ಕಾಗಿನ ಸಮಿತಿ' ನಿರ್ವಹಿಸುತ್ತಿತ್ತು. ಇದೀಗ ಈ ಸಮಿತಿಯನ್ನು ಉ.ಕೊರಿಯಾ ರದ್ದುಗೊಳಿಸಿದೆ. `ಯುದ್ಧದಲ್ಲಿರುವ ಅತ್ಯಂತ ಪ್ರತಿಕೂಲ ಎರಡು ದೇಶಗಳು ಈಗ ಕೊರಿಯನ್ ಪರ್ಯಾಯ ದ್ವೀಪದಲ್ಲಿ ತೀವ್ರ ಮುಖಾಮುಖಿಯಲ್ಲಿವೆ. ಕೊರಿಯಾದ ಪುನರೇಕೀಕರಣವನ್ನು ದಕ್ಷಿಣ ಕೊರಿಯಾ ಜತೆಗೆ ಎಂದಿಗೂ ಸಾಧಿಸಲಾಗುವುದಿಲ್ಲ' ಎಂದು ಸಂಸತ್‍ನಲ್ಲಿ ಅಂಗೀಕರಿಸಿದ ನಿರ್ಣಯ ಹೇಳಿದೆ. ಉಭಯ ಕೊರಿಯಾಗಳ ನಡುವಿನ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ತೀವ್ರ ಹದಗೆಡುತ್ತಿದ್ದು ಕಳೆದ ನವೆಂಬರ್‍ನಲ್ಲಿ ಉತ್ತರ ಕೊರಿಯಾವು ಬೇಹುಗಾರಿಕಾ ಉಪಗ್ರಹವನ್ನು ಉಡಾವಣೆ ನಡೆಸಿದ ಬಳಿಕ, ಉದ್ವಿಗ್ನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ 2018ರಲ್ಲಿ ಮಾಡಿಕೊಳ್ಳಲಾದ ಮಿಲಿಟರಿ ಒಪ್ಪಂದವನ್ನು ಆಂಶಿಕವಾಗಿ ದಕ್ಷಿಣ ಕೊರಿಯಾ ಅಮಾನತಿನಲ್ಲಿರಿಸಿದೆ. 75 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳು ಈಗಲೂ ಪರಸ್ಪರರನ್ನು ಕಾನೂನು ಬಾಹಿರ ವ್ಯವಸ್ಥೆ ಎಂದೇ ಪರಿಗಣಿಸುತ್ತಿವೆ. ಎರಡೂ ಕೊರಿಯಾಗಳ ಸಂವಿಧಾನದಲ್ಲಿ ಪರ್ಯಾಯ ದ್ವೀಪದ ಮೇಲೆ ಸಾರ್ವಭೌಮತ್ವವನ್ನು ಪ್ರತಿಪಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News