ನೆರವು ಯಾಚಿಸಿದ 12 ದಿನಗಳ ಬಳಿಕ ಆರು ವರ್ಷದ ಗಾಝಾ ಬಾಲಕಿಯ ಮೃತದೇಹ ಪತ್ತೆ

Update: 2024-02-11 04:29 GMT

Photo: twitter.com/QudsNen

ಗಾಝಾಪಟ್ಟಿ: ನನಗೆ ಭಯವಾಗುತ್ತಿದೆ, ದಯವವಿಟ್ಟು ಬನ್ನಿ ರಕ್ಷಣಾ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಸಹಾಯ ಯಾಚಿಸಿದ್ದ ಪುಟ್ಟ ಬಾಲಕಿ ಹಿಂದ್ ರಜಬ್, 12 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯ ಕುಟುಂಬದ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಪುಟ್ಟ ಬಾಲಕಿ ಸಹಾಯ ಯಾಚಿಸಿದ್ದಳು ಎಂದು indianexpress.com ವರದಿ ಮಾಡಿದೆ.

ಮೂರು ಗಂಟೆ ಕಾಲ ವಾಹನದಲ್ಲಿ ಸಂಬಂಧಿಕರ ಮೃತದೇಹದ ಬಳಿ ಸಿಕ್ಕಿಹಾಕಿಕೊಂಡಿದ್ದ ಬಾಲಕಿ ತನ್ನನ್ನು ರಕ್ಷಿಸುವಂತೆ ರೆಡ್ ಕ್ರೆಸೆಂಟ್ ಗೆ ಮೊರೆ ಇಟ್ಟಿದ್ದಳು. ಜನವರಿ 29ರಂದು ರಕ್ಷಣಾ ಕಾರ್ಯಕರ್ತರೊಂದಿಗೆ ಆಕೆಯ ನೆರವಿಗೆ ಕಳುಹಿಸಲಾಗಿದ್ದ ಆಂಬುಲೆನ್ಸ್ ವಾಹನದ ಸಂಪರ್ಕ ಕಳೆದುಕೊಂಡಿದ್ದು , ಹಿಂದ್ ರಜಬ್ ನಾಪತ್ತೆಯಾಗಿದ್ದಳು.

ಶನಿವಾರ ಬೆಳಿಗ್ಗೆ ಗಾಝಾ ಪಟ್ಟಣದ ಟೆಲ್ ಅಲ್ ಹವಾ ಪ್ರದೇಶದಲ್ಲಿ ಕಾರಿನ ಒಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ಫೆಲಸ್ತೀನ್ ರೆಡ್ ಕ್ರೆಸೆಂಟ್ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, "ಹಿಂದ್ಗೆ ನೆರವು ನೀಡಲು ಅಕೆಯನ್ನು ಹುಡುಕಿಕೊಂಡು ತೆರಳಿದ್ದ ಇಬ್ಬರು ರಕ್ಷಣಾ ಕಾರ್ಯಕರ್ತರು ಇಸ್ರೇಲಿ ದಾಳಿಯಿಂದ ಜೀವ ಕಳೆದುಕೊಂಡಿದ್ದಾರೆ" ಎಂದು ಹೇಳಿದೆ.

ಇಸ್ರೇಲಿ ಪಡೆಗಳು ನಗರದಲ್ಲಿ ಮತ್ತಷ್ಟು ಸನಿಹಕ್ಕೆ ಬಂದ ಹಿನ್ನೆಲೆಯಲ್ಲಿ ಗಾಝಾ ನಗರದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ಕುಟುಂಬ ಕಾರಿನಲ್ಲಿ ಹೊರಟಿತ್ತು. ಈ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಮೃತದೇಹಗಳ ನಡುವೆ ಬಾಲಕಿ ನೆರವಿಗಾಗಿ ಯಾಚಿಸುತ್ತಿದ್ದುದು ಎರಡು ವಾರಗಳ ಹಿಂದೆ ಕೊನೆಯ ಬಾರಿ ಕಂಡುಬಂದಿತ್ತು. ಹಿಂದ್ ಹಾಗೂ ಕಾರಿನಲ್ಲಿದ್ದ ಎಲ್ಲರೂ ಹುತಾತ್ಮರಾಗಿದ್ದಾರೆ ಎಂದು ಬಾಲಕಿಯ ಅಜ್ಜ ಬಾಹ ಹಮದಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News