ಅಮೆರಿಕದಿಂದ ಮಧ್ಯಪ್ರಾಚ್ಯದ ಉದ್ವಿಗ್ನತೆಗೆ ಉದ್ದೇಶಪೂರ್ವಕ ಪ್ರಚೋದನೆ: ವಿಶ್ವಸಂಸ್ಥೆಯಲ್ಲಿ ರಶ್ಯ, ಚೀನಾ ಆರೋಪ
ವಿಶ್ವಸಂಸ್ಥೆ : ಇತ್ತೀಚೆಗೆ ಇರಾಕ್ ಮತ್ತು ಸಿರಿಯಾದಲ್ಲಿ ಇರಾನ್ ಬೆಂಬಲಿತ ಗುಂಪುಗಳ ನೆಲೆಯ ಮೇಲೆ ಪ್ರತೀಕಾರದ ದಾಳಿ ನಡೆಸುವ ಮೂಲಕ ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉಲ್ಬಣಗೊಂಡಿರುವ ಉದ್ವಿಗ್ನತೆಯನ್ನು ಮತ್ತಷ್ಟು ಪ್ರಚೋದಿಸುತ್ತಿದೆ ಎಂದು ರಶ್ಯ ಮತ್ತು ಚೀನಾ ಆರೋಪಿಸಿವೆ.
ಜೋರ್ಡನ್‍ನಲ್ಲಿ ಅಮೆರಿಕದ ಸೇನಾನೆಲೆಯ ಮೇಲೆ ಜನವರಿ 28ರಂದು ನಡೆದ ಡ್ರೋನ್ ದಾಳಿಯಲ್ಲಿ ಅಮೆರಿಕದ ಮೂವರು ಯೋಧರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಫೆಬ್ರವರಿ 2ರ ತಡರಾತ್ರಿ ಅಮೆರಿಕದ ಸೇನೆ ಇರಾಕ್ ಮತ್ತು ಸಿರಿಯಾದ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಗಾಝಾದಲ್ಲಿ ಮುಂದುವರಿದಿರುವ ಯುದ್ಧ, ಅಮೆರಿಕದ ದಾಳಿ ಮತ್ತು ಆ ಬಳಿಕದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಶ್ಯದ ಕೋರಿಕೆಯ ಮೇರೆಗೆ ಸೋಮವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥೆ ರೋಸ್‍ಮೇರಿ ಡಿಕಾರ್ಲೊ, ಉದ್ವಿಗ್ನತೆ ಮತ್ತಷ್ಟು ಹೆಚ್ಚುವುದನ್ನು ತಡೆಯಲು ಹಾಗೂ ಪ್ರದೇಶದಾದ್ಯಂತ ಉದ್ವಿಗ್ನತೆಯನ್ನು ತಗ್ಗಿಸಲು ಸಹಾಯ ಮಾಡುವಂತೆ ಸದಸ್ಯ ದೇಶಗಳಿಗೆ ಮನವಿ ಮಾಡಿದರು. ದಾಳಿಗಳನ್ನು ಹೆಚ್ಚಿಸುವುದು ತಪ್ಪು ಲೆಕ್ಕಾಚಾರದ ಅಪಾಯಕ್ಕೆ ಕಾರಣವಾಗಬಹುದು ಎಂದು ಅವರು ಇದೇ ಸಂದರ್ಭ ಎಚ್ಚರಿಕೆ ನೀಡಿದರು.
`ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ನೆಲೆಗಳ ಮೇಲೆ ನಡೆಸಿದ ದಾಳಿಯು ಗಾಝಾದಲ್ಲಿ ಮುಂದುವರಿದಿರುವ ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷವಾಗಿ ವ್ಯಾಪಿಸುವ ಭೀತಿಗೆ ಕಾರಣವಾಗಿದೆ. ಅಮೆರಿಕದ ವೈಮಾನಿಕ ದಾಳಿಗಳು ನಿರ್ದಿಷ್ಟವಾಗಿ, ಉದ್ದೇಶಪೂರ್ವಕವಾಗಿ ಸಂಘರ್ಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿರುವುದು ಸ್ಪಷ್ಟವಾಗಿದೆ' ಎಂದು ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯ ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಚೀನಾದ ರಾಯಭಾರಿ ಜುನ್ ಝಾಂಗ್ ` ಅಮೆರಿಕದ ಕ್ರಮಗಳು ಮಧ್ಯಪ್ರಾಚ್ಯದಲ್ಲಿ ಮುಯ್ಯಿಗೆ ಮುಯ್ಯಿ ಹಿಂಸಾಚಾರದ ಕೆಟ್ಟ ಉಪಕ್ರಮಗಳಿಗೆ ದಾರಿ ಮಾಡಿಕೊಡುತ್ತವೆ' ಎಂದರು.
ಅಮೆರಿಕದ ನೆಲೆಗಳ ಮೇಲೆ ನಡೆದಿರುವ ದಾಳಿಗೆ ಇರಾನ್ ಅಥವಾ ಅದರ ಸಶಸ್ತ್ರ ಪಡೆಗಳನ್ನು ಆರೋಪಿಸುವ ಯಾವುದೇ ಪ್ರಯತ್ನವು ತಪ್ಪುದಾರಿಗೆ ಎಳೆಯುವ, ಆಧಾರ ರಹಿತ ಕ್ರಮವಾಗಿದೆ ಎಂದು ಇರಾನ್ ರಾಯಭಾರಿ ಅಮೀರ್ ಸಯೀದ್ ಪ್ರತಿಪಾದಿಸಿದರು. ತನ್ನ ಭದ್ರತೆಯ ಮೇಲೆ ಪರಿಣಾಮ ಬೀರುವ ಯಾವುದೇ ಬೆದರಿಕೆ, ದಾಳಿ ಅಥವಾ ಆಕ್ರಮಣಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವ ಅಂತರ್ಗತ ಹಕ್ಕುಗಳನ್ನು ಚಲಾಯಿಸಲು ಇರಾನ್ ಹಿಂಜರಿಯುವುದಿಲ್ಲ ಎಂದವರು ಹೇಳಿದರು.
ಇದಕ್ಕೆ ಉತ್ತರಿಸಿದ ಅಮೆರಿಕದ ರಾಯಭಾರಿ ರಾಬರ್ಟ್ ವುಡ್ `ಗಾಝಾದಲ್ಲಿನ ಸಂಘರ್ಷದ ತೀವ್ರತೆಯನ್ನು ಕಡಿಮೆಗೊಳಿಸಲು ಸಕ್ರಿಯ ಪ್ರಯತ್ನ ನಡೆಸುತ್ತಿರುವ ಅಮೆರಿಕ ಈ ವಲಯದಲ್ಲಿ ಇನ್ನಷ್ಟು ಸಂಘರ್ಷವನ್ನು ಬಯಸುವುದಿಲ್ಲ. ನಮಗೆ ಇರಾನ್ ಜತೆಗೆ ನೇರ ಸಂಷರ್ಘದ ಉದ್ದೇಶವಿಲ್ಲ. ಆದರೆ ನಮ್ಮ ಯೋಧರನ್ನು ಸ್ವೀಕಾರಾರ್ಹವಲ್ಲದ ದಾಳಿಯಿಂದ ರಕ್ಷಿಸಲು ನಾವು ಬದ್ಧರಾಗಿದ್ದೇವೆ' ಎಂದರು.
ವಿಶ್ವಸಂಸ್ಥೆ ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಬೇಕು: ಇರಾಕ್
ಮಧ್ಯಪ್ರಾಚ್ಯದಲ್ಲಿನ ಎಲ್ಲಾ ಬಿಕ್ಕಟ್ಟುಗಳು ಒಂದಕ್ಕೊಂದು ಜೋಡಣೆಗೊಂಡಿದೆ ಎಂದು ವಿಶ್ವಸಂಸ್ಥೆಯಲ್ಲಿ ಇರಾಕ್‍ನ ಸಹಾಯಕ ರಾಯಭಾರಿ ಅಬ್ಬಾಸ್ ಕಧೋಮ್ ಒಬೈದ್ ಹೇಳಿದರು.
ಇರಾಕ್ ಈ ಪ್ರದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ತನ್ನ ಸ್ವಾಭಾವಿಕ ಪಾತ್ರವನ್ನು ಖಚಿತಪಡಿಸುವ ಸಮತೋಲಿತ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದೆ. ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಿಸುವ ಬಗ್ಗೆ ನಾವು ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಆದರೆ ಇರಾಕ್‍ನ ನೆಲದಲ್ಲಿನ ನೆಲೆಗಳನ್ನು ಗುರಿಯಾಗಿಸಿದ ಅಮೆರಿಕದ ದಾಳಿ ಅಮೆರಿಕದೊಂದಿಗಿನ ನಮ್ಮ ಸ್ನೇಹಸಂಬಂಧಕ್ಕೆ ಅನುಸಾರವಾಗಿಲ್ಲ. ನಮ್ಮ ಸಾರ್ವಭೌಮತೆ ಮತ್ತು ಭದ್ರತೆಯನ್ನು ಉಲ್ಲಂಘಿಸುವ ಯಾವುದೇ ದಾಳಿಯನ್ನು ನಾವು ತಿರಸ್ಕರಿಸುತ್ತೇವೆ. ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.