ಮಾಸ್ಕೋದಲ್ಲಿ ಪದಚ್ಯುತ ಸಿರಿಯಾ ಅಧ್ಯಕ್ಷ ಅಸ್ಸಾದ್, ಕುಟುಂಬ

Update: 2024-12-09 16:04 GMT
PC : PTI

ಮಾಸ್ಕೋ : ರವಿವಾರ ಬಂಡುಕೋರ ಪಡೆ ಸಿರಿಯಾ ರಾಜಧಾನಿ ದಮಾಸ್ಕಸ್ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಂತೆಯೇ ಪದಚ್ಯುತ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಹಾಗೂ ಅವರ ಕುಟುಂಬ(ಪತ್ನಿ ಮತ್ತು ಮೂವರು ಮಕ್ಕಳು) ರಶ್ಯಕ್ಕೆ ಆಗಮಿಸಿದ್ದಾರೆ ಎಂದು ರಶ್ಯ ಅಧ್ಯಕ್ಷರ ವಕ್ತಾರರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.

ಮಾಸ್ಕೋಗೆ ಆಗಮಿಸಿದ ಅಸ್ಸಾದ್ ಮತ್ತವರ ಕುಟುಂಬಕ್ಕೆ ಮಾನವೀಯ ನೆಲೆಯ ಮೇಲೆ ರಶ್ಯ ಅಧಿಕಾರಿಗಳು ಆಶ್ರಯ ಕಲ್ಪಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾದ್ ಹಾಗೂ ಬಂಡುಕೋರ ಪಡೆಯ ಪ್ರತಿನಿಧಿಗಳ ನಡುವಿನ ಮಾತುಕತೆಯ ಬಳಿಕ ಅಸ್ಸಾದ್ ರಾಜೀನಾಮೆ ನೀಡಿ ದೇಶ ತೊರೆಯಲು ನಿರ್ಧರಿಸಿದ್ದಾರೆ. ಹಾಗೂ ಶಾಂತಿಯುತ ಅಧಿಕಾರ ಹಸ್ತಾಂತರಕ್ಕೆ ಆದೇಶಿಸಿದ್ದಾರೆ ಎಂದು ರಶ್ಯದ ವಿದೇಶಾಂಗ ಇಲಾಖೆ ರವಿವಾರ ಹೇಳಿಕೆ ನೀಡಿತ್ತು.

ಸಿರಿಯಾ ರಾಜಧಾನಿ ಬಂಡುಕೋರರ ವಶಕ್ಕೆ ಬಂದ ಬಳಿಕ ಅಸ್ಸಾದ್ ಭವಿಷ್ಯದ ಬಗ್ಗೆ ಊಹಾಪೋಹ ಗರಿಗೆದರಿತ್ತು. ಅವರು ರಶ್ಯ ಅಥವಾ ಇರಾನ್‍ನಲ್ಲಿ ಆಶ್ರಯ ಕೋರಬಹುದು ಎಂದು ಊಹಿಸಲಾಗಿತ್ತು. ಬಂಡುಕೋರ ಪಡೆ ಆಕ್ರಮಣ ಆರಂಭಿಸುವುದಕ್ಕೂ ಮುನ್ನ ಅಸ್ಸಾದ್ ರಶ್ಯಕ್ಕೆ ಭೇಟಿ ನೀಡಿರುವುದನ್ನು ಹಾಗೂ ಬಳಿಕ ಸಿರಿಯಾದ ದಮಾಸ್ಕಸ್‍ನಲ್ಲಿ ಇರಾನ್‍ನ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿರುವ ಫೋಟೋಗಳನ್ನು ಇರಾನ್‍ನ ಮಾಧ್ಯಮಗಳು ಪ್ರಕಟಿಸಿವೆ.

ಒಂದು ವಾರದ ಹಿಂದೆ ಬಂಡುಕೋರರ ಪಡೆ ಮುನ್ನಡೆ ಸಾಧಿಸಿದಂದಿನಿಂದಲೂ ಅಸ್ಸಾದ್ ಸಾರ್ವಜನಿಕವಾಗಿ ಮಾತನಾಡಿಲ್ಲ. ಅಸ್ಸಾದ್ ಶನಿವಾರ ರಾತ್ರಿ 7 ಗಂಟೆಗೆ(ಅಂತರಾಷ್ಟ್ರೀಯ ಕಾಲಮಾನ) ದಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಖಾಸಗಿ ವಿಮಾನದಲ್ಲಿ ರಹಸ್ಯ ಸ್ಥಳಕ್ಕೆ ತೆರಳಿರುವುದಾಗಿ ಮಾನವ ಹಕ್ಕುಗಳ (ಸಿರಿಯಾ) ವೀಕ್ಷಕ ಏಜೆನ್ಸಿ ವರದಿ ಮಾಡಿತ್ತು.

ಈ ಮಧ್ಯೆ, ಸಿರಿಯಾದಲ್ಲಿರುವ ರಶ್ಯದ ರಾಜತಾಂತ್ರಿಕ ನಿಯೋಗ ಹಾಗೂ ಮಿಲಿಟರಿ ನೆಲೆಗಳ ಭದ್ರತೆಯ ಬಗ್ಗೆ ದಂಗೆಕೋರ ಪಡೆ ಖಾತರಿ ನೀಡಿರುವುದಾಗಿ ರಶ್ಯ ಅಧ್ಯಕ್ಷರ ಕಚೇರಿಯ ಮೂಲಗಳು ಹೇಳಿವೆ.

►ಮಾಸ್ಕೋದ ಸಿರಿಯಾ ರಾಯಭಾರಿ ಕಚೇರಿಯಲ್ಲಿ ವಿರೋಧ ಪಕ್ಷಗಳ ಧ್ವಜ

ಪದಚ್ಯುತ ಅಧ್ಯಕ್ಷ ಅಸ್ಸಾದ್ ರಶ್ಯದಲ್ಲಿ ಆಶ್ರಯ ಪಡೆಯುತ್ತಿದ್ದಂತೆಯೇ ಮಾಸ್ಕೋದಲ್ಲಿರುವ ಸಿರಿಯಾ ರಾಯಭಾರಿ ಕಚೇರಿಯಲ್ಲಿ ವ್ಯಕ್ತಿಗಳ ಗುಂಪೊಂದು ಸೋಮವಾರ ಬೆಳಿಗ್ಗೆ ವಿರೋಧ ಪಕ್ಷಗಳ ಧ್ವಜವನ್ನು ಹಾರಿಸಿದೆ ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಯಭಾರಿ ಕಚೇರಿಯ ಬಾಲ್ಕನಿಯಲ್ಲಿ ನಿಂತ ವ್ಯಕ್ತಿಗಳು ಸಿರಿಯಾದ ವಿರೋಧ ಪಕ್ಷಗಳ ಹಸಿರು, ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಧ್ವಜವನ್ನು ಮೇಲಕ್ಕೇರಿಸಿ ಸಂಭ್ರಮಿಸಿದರು. ಇವತ್ತು ರಾಯಭಾರಿ ಕಚೇರಿಯು ಹೊಸ ಧ್ವಜದಡಿ ತೆರೆದಿದೆ ಮತ್ತು ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ರಾಯಭಾರಿ ಕಚೇರಿಯ ಸಿಬ್ಬಂದಿಯನ್ನು ಉಲ್ಲೇಖಿಸಿ ತಾಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News