ಭಾರತ -ಚೀನಾ ನಡುವೆ ‘ಸ್ಯಾಂಡ್‌ವಿಚ್’ ಆಗಲು ಶ್ರೀಲಂಕಾ ಬಯಸುವುದಿಲ್ಲ : ನೂತನ ಅಧ್ಯಕ್ಷ ದಿಸ್ಸಾನಾಯಕೆ

Update: 2024-09-24 16:39 GMT

ಅನುರ ಕುಮಾರ್ ದಿಸ್ಸಾನಾಯಕೆ | PC : FB

ಕೊಲಂಬೊ : ಏಶ್ಯದ ಬಲಾಢ್ಯರಾಷ್ಟ್ರಗಳಾದ ಭಾರತ ಹಾಗೂ ಚೀನಾದ ನಡುವೆ ಶ್ರೀಲಂಕಾವು ‘ಸ್ಯಾಂಡ್‌ವಿಚ್’ ಆಗಿ ಉಳಿದುಕೊಳ್ಳುವುದನ್ನು ತಾನು ಬಯಸುವುದಿಲ್ಲವೆಂದು ದ್ವೀಪರಾಷ್ಟ್ರದ ನೂತನ ಅಧ್ಯಕ್ಷ ಅನುರ ಕುಮಾರ್ ದಿಸ್ಸಾನಾಯಕೆ ಅವರು ಮಂಗಳವಾರ ಹೇಳಿದ್ದಾರೆ.

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಮೊನೊಕ್ಲೊ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಪ್ರಾಬಲ್ಯವನ್ನು ಸಾಧಿಸಲು ಪ್ರಸಕ್ತ ನಡೆಯುತ್ತಿರುವ ಪೈಪೋಟಿಯ ನಡುವೆ ಸಿಕ್ಕಿಹಾಕಿಕೊಳ್ಳಲು ಶ್ರೀಲಂಕಾವು ಇಚ್ಛಿಸುವುದಿಲ್ಲವೆಂದು ಹೇಳಿದರು.

“ಪ್ರಾಬಲ್ಯ ಸ್ಥಾಪನೆಗೆ ನಡೆಯುವ ಯಾವುದೇ ಸ್ಪರ್ಧೆಯಲ್ಲಿ ನಾವು ಭಾಗವಹಿಸುವುದಿಲ್ಲ ಅಥವಾ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಯಾವುದೇ ದೇಶವನ್ನು ಬೆಂಬಲಿಸಲು ಬಯಸುವುದಿಲ್ಲ. ಉಭಯದೇಶಗಳೂ (ಭಾರತ ಹಾಗೂ ಚೀನಾ) ನಮ್ಮ ಉತ್ತಮ ಗೆಳೆಯರು. ಭವಿಷ್ಯದಲ್ಲಿ ನಮ್ಮ ಪಾಲುದಾರಿಕೆಯು ಚೆನ್ನಾಗಿರುವುದು ಎಂದು ನಾನು ಆಶಿಸುತ್ತೇನೆ’’ ಎಂದವರು ಹೇಳಿದ್ದಾರೆ.

ಯುರೋಪ್ ಒಕ್ಕೂಟ, ಮಧ್ಯಪಾಚ್ಯ ಹಾಗೂ ಆಫ್ರಿಕ ಖಂಡದ ರಾಷ್ಟ್ರಗಳ ಜೊತೆಗೂ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ತಾನು ಬಯಸುವುದಾಗಿ ಅವರು ದಿಸ್ಸಾ ನಾಯಕೆ ಹೇಳಿದರು. ಶ್ರೀಲಂಕಾದ ವಿದೇಶಾಂಗ ನೀತಿಯ ನಿಷ್ಪಕ್ಷಪಾತದಿಂದ ಕೂಡಿರುವುದು ಎಂದು ಹೇಳಿದರು.

ಶ್ರೀಲಂಕಾವು ದಿವಾಳಿಯಾದ ರಾಷ್ಟ್ರವಾಗಿದೆ. 28 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಸಾಲದ ಹೊರೆ ನಮ್ಮ ಮೇಲಿದೆ. ದೇಶವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವುದೇ ನನ್ನ ಆದ್ಯತೆಯಾಗಿದೆ ಎಂದು ದಿಸ್ಸಾನಾಯಕೆ ಹೇಳಿದರು.

ವಾಸ್ತವವಾಗಿ ರಾಜಪಕ್ಸ ಸಹೋದರರ ಆಳ್ವಿಕೆಯಲ್ಲಿ ಶ್ರೀಲಂಕಾವು ಚೀನಾದ ಸಾಲದ ಜಾಲಕ್ಕೆ ಸಿಲುಕಿತ್ತು. 2022ರ ಆರ್ಥಿಕ ಹಿಂಜರಿತದ ಬಳಿಕ ರನಿಲ್ ವಿಕ್ರಮಸಿಂಘೆ ಅವರು ಭಾರತದ ಜೊತೆಗಿನ ಬಾಂಧವ್ಯವನ್ನು ಸುಧಾರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News