ಚೀನಾದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನಸಂದಣಿ ಮೇಲೆ ಕಾರು ನುಗ್ಗಿಸಿದ ಚಾಲಕ : 35 ಮಂದಿ ಮೃತ್ಯು!
ಬೀಜಿಂಗ್ : ಸೋಮವಾರ ಚೀನಾದ ಝುಹೈ ಕ್ರೀಡಾಂಗಣದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರ ಗುಂಪಿನ ಮೇಲೆ ಕಾರೊಂದು ನುಗ್ಗಿದ ಪರಿಣಾಮ ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಯಾನ್(62) ಎಂಬ ವ್ಯಕ್ತಿ ಝುಹೈ ಸ್ಪೋರ್ಟ್ಸ್ ಸೆಂಟರ್ ಗೆ ಎಸ್ ಯುವಿ ಕಾರನ್ನು ನುಗ್ಗಿಸಿದ್ದು, ಇದನ್ನು ಸ್ಥಳೀಯ ಪೊಲೀಸರು ಗಂಭೀರ ಮತ್ತು ಕೆಟ್ಟ ದಾಳಿ ಎಂದು ವಿವರಿಸಿದ್ದಾರೆ. ಗಾಯಗೊಂಡವರಲ್ಲಿ ವೃದ್ಧರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಅಪಘಾತದ ಬಳಿಕ ಪಲಾಯನ ಮಾಡಲು ಪ್ರಯತ್ನಿಸುವಾಗ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದು ಅಪಘಾತವೋ ಅಥವಾ ದಾಳಿಯೋ ಎಂಬುದು ಇನ್ನು ಕೂಡ ಸ್ಪಷ್ಟವಾಗಿಲ್ಲ. ವಿಚ್ಛೇದನದ ನಂತರ ಆಸ್ತಿ ಇತ್ಯರ್ಥದ ಬಗ್ಗೆ ಫ್ಯಾನ್ ಅಸಮಾಧಾನಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಕಾರು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಸ್ಥಳೀಯ ಸರ್ಕಾರಗಳಿಗೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.