ದುಬೈ: ಒಂದೇ ದಿನದಲ್ಲಿ ಒಂದೂವರೆ ವರ್ಷದ ಮಳೆ

Update: 2024-04-17 16:48 GMT

PC : PTI

ದುಬೈ : ಕಳೆದ ವರ್ಷ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಮಾವೇಶವನ್ನು ಆಯೋಜಿಸಿದ್ದ ಯುಎಇ ಕಳೆದ 75 ವರ್ಷಗಳಲ್ಲೇ ದಾಖಲೆ ಪ್ರಮಾಣದ ಮಳೆಗೆ ಸಾಕ್ಷಿಯಾಗಿದೆ. ದುಬೈಯಲ್ಲಿ ಸಾಮಾನ್ಯವಾಗಿ ಒಂದೂವರೆ ವರ್ಷದ ಅವಧಿಯಲ್ಲಿ ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದಿದೆ ಎಂದು ಸರಕಾರ ಹೇಳಿದೆ.

ಕಳೆದ 75 ವರ್ಷಗಳಲ್ಲೇ ದಾಖಲೆ ಮಳೆಗೆ ಯುಎಇ ಸಾಕ್ಷಿಯಾಗಿದೆ. ಅಲ್‍ಐನ್ ನಗರದಲ್ಲಿರುವ ಖತ್ಮ್-ಅಲ್ ಪ್ರದೇಶದಲ್ಲಿ 24 ಗಂಟೆಗೂ ಕಡಿಮೆ ಅವಧಿಯಲ್ಲಿ 254.8 ಮಿ.ಮೀ ಮಳೆಯಾಗಿದ್ದು ದೇಶದ ಹವಾಮಾನ ಇತಿಹಾಸದಲ್ಲೇ ಅಸಾಧಾರಣ ವಿದ್ಯಮಾನ ಇದಾಗಿದೆ. ದುಬೈಯಲ್ಲಿ ವ್ಯಾಪಕ ಪ್ರವಾಹದ ಸ್ಥಿತಿ ಉಂಟಾಗಿದ್ದು 1.5 ವರ್ಷ ಸುರಿಯುವ ಮಳೆ ಒಂದೇ ದಿನ ಸುರಿದಿದೆ. 24 ಗಂಟೆಗಳಲ್ಲಿ ಸುಮಾರು 5 ಇಂಚಿನಷ್ಟು ಮಳೆಯಾಗಿದೆ ' ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ (ಎನ್‍ಸಿಎಂ) ಟ್ವೀಟ್(ಎಕ್ಸ್) ಮಾಡಿದೆ. ಯುಎಇಯ 7 ಎಮಿರೇಟ್ಸ್‍ಗಳಲ್ಲಿ ಒಂದಾಗಿರುವ ದುಬೈನಲ್ಲಿರುವ ಮಾಲ್‍ಗಳು, ವಿಮಾನ ನಿಲ್ದಾಣಗಳು ಜಲಾವೃತಗೊಂಡಿವೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಹದ ಕಾರಣದಿಂದ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ತೀರಾ ಅಗತ್ಯವಿದ್ದರೆ ಮಾತ್ರ ವಿಮಾನ ನಿಲ್ದಾಣಕ್ಕೆ ಬರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ದುಬೈನ ಪ್ರಮುಖ ಮಾಲ್‍ಗಳಾದ ದುಬೈ ಮಾಲ್ ಮತ್ತು ಮಾಲ್ ಆಫ್ ಎಮಿರೇಟ್ಸ್ ಎರಡರಲ್ಲೂ ನೀರು ನುಗ್ಗಿದ್ದರಿಂದ ಸಮಸ್ಯೆಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲೂ ಮೊಣಕಾಲು ಮಟ್ಟದಲ್ಲಿ ನೀರು ನಿಂತಿದೆ.

ಯುಎಇಯ ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆ ಮತ್ತು ದುಬೈಯಲ್ಲಿ ಪ್ರವಾಹದಂತಹ ಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ದುಬೈಯಲ್ಲಿರುವ ಭಾರತೀಯ ಕಾನ್ಸುಲೇಟ್ ಭಾರತೀಯ ಪ್ರಜೆಗಳಿಗೆ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. (+971501205172, +971569950590, +971507347676, +971585754213). 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News